ನವದೆಹಲಿ: ಓರ್ವ ಪುರುಷ ಹಾಗೂ ಮಹಿಳೆಯ ಜೋಡಿ ಮೃತದೇಹಗಳು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ರಾಷ್ಟ್ರೀಯ ರಾಜಧಾನಿ ದೆಹಲಿಯ ಹೋಟೆಲ್ವೊಂದರಲ್ಲಿ ನಡೆದಿದೆ. ಸ್ಥಳದಲ್ಲಿ ಡೆತ್ನೋಟ್ ಪತ್ತೆಯಾಗಿದ್ದು, ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು ಹಾಗೂ ಒಟ್ಟಿಗೆ ತಮ್ಮ ಜೀವನ ಕೊನೆಗೊಳಿಸಲು ನಿರ್ಧರಿಸಿದ್ದರು ಎಂಬುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಲ್ಲಿನ ಜಾಫ್ರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಮೌಜ್‌ಪುರ ಮೆಟ್ರೋ ನಿಲ್ದಾಣದ ಬಳಿಯ ಹೋಟೆಲ್ ಕೊಠಡಿಯಲ್ಲಿ ಶುಕ್ರವಾರ ರಾತ್ರಿ ಇಬ್ಬರ ಶವಗಳು ಪತ್ತೆಯಾಗಿವೆ. ಮೃತರನ್ನು ಉತ್ತರ ಪ್ರದೇಶದ ಮೀರತ್ ನಿವಾಸಿ ಸೋಹ್ರಾಬ್ (28) ಮತ್ತು ಲೋನಿ ನಿವಾಸಿ ಆಯೇಶಾ (27) ಎಂದು ಗುರುತಿಸಲಾಗಿದೆ. ಸೋಹ್ರಾಬ್ ಶವ ಸೀಲಿಂಗ್ ಫ್ಯಾನ್‌ಗೆ ನೈಲಾನ್ ಹಗ್ಗದಿಂದ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾದರೆ, ಆಯೇಷಾ ಮೃತದೇಹ ಹಾಸಿಗೆಯ ಮೇಲೆ ಪತ್ತೆಯಾಗಿದೆ. ಈಕೆಯ ಕುತ್ತಿಗೆಯ ಮೇಲೆ ಕೆಲವು ಗಾಯದ ಗುರುತುಗಳಿವೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಜಾಯ್ ಟಿರ್ಕಿ ಹೇಳಿದ್ದಾರೆ.
ಮೃತಳು ಇಬ್ಬರು ಮಕ್ಕಳ ತಾಯಿ:ಆಯೇಶಾ ಶವ ಪಕ್ಕದಲ್ಲಿ ಹಾಸಿಗೆಯ ಮೇಲೆ ಅರ್ಧ ಪುಟದ ಹಿಂದಿ ಕೈಬರಹದ ಡೆತ್ನೋಟ್ ದೊರೆತಿದೆ. ಇದರ ಪ್ರಕಾರ, ಇಬ್ಬರೂ ಪ್ರೀತಿಸುತ್ತಿದ್ದರು. ಒಟ್ಟಿಗೆ ತಮ್ಮ ಜೀವನವನ್ನು ಕೊನೆಗೊಳಿಸಲು ನಿರ್ಧರಿಸಿದ್ದಾರೆಂದು ಕಂಡು ಬಂದಿದೆ. ಅಲ್ಲದೇ, ಆಯೇಶಾ 9 ವರ್ಷದ ಬಾಲಕ ಮತ್ತು 4 ವರ್ಷದ ಬಾಲಕಿಯ ತಾಯಿ ಆಗಿದ್ದಳು. ಈಕೆಯ ಪತಿ ಮೊಹಮ್ಮದ್ ಗುಲ್ಫಾಮ್ (28) ಎಂಬಾತ ಜಿಮ್ ಪ್ರೋಟೀನ್ ಪೂರಕಗಳನ್ನು ಮಾರಾಟ ಮಾಡುತ್ತಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.