ಶ್ರೀನಗರ :ಮೊಟ್ಟ ಮೊದಲ ಬಾರಿಗೆ ಜಮ್ಮು ಕಾಶ್ಮೀರದ ಎರಡು ಪ್ರಾಂತ್ಯಗಳ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಯ ತಲಾ 140 ಸ್ಥಾನಗಳಂತೆ ಒಟ್ಟು 280 ಸ್ಥಾನಗಳಿಗೆ 8 ಹಂತಗಳಲ್ಲಿ ಚುನಾವಣೆಯು ನಡೆದಿತ್ತು. ಇಂದು ಎಲ್ಲ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.
ಡಿಡಿಸಿ ಚುನಾವಣೆಯು ಜಮ್ಮು ಕಾಶ್ಮೀರದಲ್ಲಿ 370 ನೇ ವಿಧಿ ಹಿಂಪಡೆದು ಎರಡು ಪ್ರಾಂತ್ಯಗಳಾಗಿ ವಿಭಜಿಸಿದ ನಂತರ ನಡೆದ ಮೊದಲ ಚುನಾವಣೆಯಾಗಿದೆ. ನವೆಂಬರ್ 28 ರಂದು ಪ್ರಾರಂಭವಾದ ಮತದಾನ ಪ್ರಕ್ರಿಯೆಯು ಕಳೆದ ಶನಿವಾರದಂದು ಒಟ್ಟು ಶೇ. 51 ರಷ್ಟು ಮತ ಚಲಾವಣೆಯೊಂದಿಗೆ ಕೊನೆಗೊಂಡಿತ್ತು. ಪಶ್ಚಿಮ ಪಾಕಿಸ್ತಾನದ ನಿರಾಶ್ರಿತರ ಪ್ರದೇಶಗಳಲ್ಲೂ ಮೊದನೇ ಬಾರಿ ಮತದಾನ ನಡೆದಿದ್ದು ವಿಶೇಷ.
ಇದನ್ನೂ ಓದಿ : ಶ್ರೀನಗರ: ಡಿಡಿಸಿ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಪಾಕ್ ಮಹಿಳೆ ಸ್ಪರ್ಧೆ... ನಾಳೆ ಭವಿಷ್ಯ ನಿರ್ಧಾರ!
ಕೇಂದ್ರಾಡಳಿತ ಪ್ರದೇಶದಲ್ಲಿ ಹೊಸ ಆಡಳಿತವನ್ನು ನೀಡಲು ಸಜ್ಜಾಗಿರುವ ಡಿಡಿಸಿಗೆ ಹೊಸ ಆಡಳಿತ ಸಮಿತಿಯನ್ನು ಈ ಚುನಾವಣೆಯಿಂದ ಆಯ್ಕೆ ಮಾಡಲಾಗುತ್ತದೆ. ಡಿಡಿಸಿಗಳು, ಪಂಚಾಯತ್ಗಳು ಮತ್ತು ಬ್ಲಾಕ್ ಅಭಿವೃದ್ಧಿ ಮಂಡಳಿಗಳ ಕಾರ್ಯನಿರ್ವಹಣೆಯನ್ನು ನೋಡಿಕೊಳ್ಳುತ್ತವೆ. ಜಿಲ್ಲಾ ಯೋಜನೆಗಳು ಮತ್ತು ಬಂಡವಾಳ ವೆಚ್ಚಗಳನ್ನು ಸಿದ್ಧಪಡಿಸುವ ಮತ್ತು ಅನುಮೋದಿಸುವ ನಿರೀಕ್ಷೆ ಇರುವ ಡಿಡಿಸಿಗಳು, ಈ ಪ್ರದೇಶದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಯೋಜನೆ ಮತ್ತು ಅಭಿವೃದ್ಧಿ ಮಂಡಳಿಗಳನ್ನು ಬದಲಾಯಿಸಲಿವೆ. ಪ್ರತಿ ಡಿಡಿಸಿ ನೇರವಾಗಿ 14 ಚುನಾಯಿತಿ ಸದಸ್ಯರನ್ನು ಹೊಂದಿರುತ್ತದೆ ಮತ್ತು ಹಣಕಾಸು, ಅಭಿವೃದ್ಧಿ, ಲೋಕೋಪಯೋಗಿ, ಆರೋಗ್ಯ ಮತ್ತು ಶಿಕ್ಷಣ ಮತ್ತು ಕಲ್ಯಾಣಕ್ಕಾಗಿ ಐದು ಸ್ಥಾಯಿ ಸಮಿತಿಗಳನ್ನು ರಚಿಸಲಾಗುತ್ತದೆ.
ಪಿಡಿಪಿ, ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪೀಪಲ್ಸ್ ಕಾನ್ಫರೆನ್ಸ್ ಸೇರಿದಂತೆ ಪ್ರಮುಖ ಮಿತ್ರ ಪಕ್ಷಗಳು ಬಿಜೆಪಿ ವಿರುದ್ಧ ಸ್ಪರ್ಧಿಸಿವೆ. ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಮರುಸ್ಥಾಪಿಸುವ ಘೋಷಣೆಯೊಂದಿಗೆ ಬಿಜೆಪಿಯೇತರ ಪಕ್ಷಗಳು ಪೀಪಲ್ಸ್ ಅಲೈಯನ್ಸ್ ರಚಿಸಿಕೊಂಡು ಒಟ್ಟಾಗಿವೆ.