ನವದೆಹಲಿ:ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ತಮ್ಮ ಜೀವನದಲ್ಲಿ ಅನುಭವಿಸಿದ ಆಘಾತಕಾರಿ ಘಟನೆಯನ್ನು ಬಹಿರಂಗ ಪಡಿಸಿದ್ದಾರೆ. ಬಾಲ್ಯದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದೆ. ನನ್ನ ತಂದೆಯೇ ನನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು. ತಾಯಿ, ಅತ್ತೆ ಮತ್ತು ಅಜ್ಜಿಯಿಂದಾಗಿ ನನಗೆ ಈ ನೋವಿನಿಂದ ಹೊರಬರಲು ಸಾಧ್ಯವಾಯಿತು ಎಂದು ಸ್ವಾತಿ ಮಲಿವಾಲ್ ತಿಳಿಸಿದ್ದಾರೆ.
ದೆಹಲಿ ಮಹಿಳಾ ಆಯೋಗವು ಇಂಡಿಯಾ ಹ್ಯಾಬಿಟಾಟ್ ಸೆಂಟರ್‌ನಲ್ಲಿ ಶನಿವಾರ ಆಯೋಜಿಸಿದ್ದ ಬಹುಮಾನ ವಿತರಣಾ ಸಮಾರಂಭವನ್ನು ಉದ್ದೇಶಿಸಿ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಮಾತನಾಡಿದರು. ತಂದೆಯ ಶೋಷಣೆಯಿಂದ ನೊಂದಿರುವ ನಾನು, ಇದರಿಂದ ಹೊರಬರುವುದು ಹೇಗೆ ಎಂದು ಸದಾ ಯೋಚಿಸುತ್ತಿದ್ದೆ. ಇಂತಹ ಸಂಕಷ್ಟದ ಸಮಯದಲ್ಲಿ ಅಜ್ಜಿ, ತಾಯಿ, ಅತ್ತೆ ನನ್ನನ್ನು ಪಾರು ಮಾಡಿದರು ಎಂದು ತಿಳಿಸಿದರು.
ನನ್ನ ತಂದೆ ನನಗೆ ಆಗ್ಗಾಗ್ಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು. ಅವರು ಮನೆಗೆ ಬಂದಾಗಲೆಲ್ಲ ನನಗೆ ಭಯವಾಗುತ್ತಿತ್ತು. ನನಗೆ ಇನ್ನೂ ನೆನಪಿದೆ.. ನಾನು ಇದೇ ಭಯದಲ್ಲಿ ಅನೇಕ ರಾತ್ರಿಗಳನ್ನು ನಿದ್ರೆಯಿಲ್ಲದೇ ಕಳೆದಿದ್ದೇನೆ. ಆ ದಿನಗಳನ್ನು ಎಂದಿಗೂ ಮರೆಯುವುದಿಲ್ಲ. ತಂದೆ ನನಗೆ ಯಾವುದೇ ಕಾರಣವಿಲ್ಲದೆ ಥಳಿಸುತ್ತಿದ್ದರು. ಒಮ್ಮೆ ಅಂತೂ ನನ್ನ ಕೂದಲನ್ನು ಹಿಡಿದು ಗೋಡೆಗೆ ಎಸೆದು, ಹೊಡೆದಿದ್ದರು ಎಂದು ವಿವರಿಸಿದರು.
ಭಯ ಪಡದೇ ಧ್ವನಿ ಎತ್ತಬೇಕು: ಮಹಿಳೆಯರು ತಮ್ಮ ಮೇಲೆ ನಡೆಯುವ ಯಾವುದೇ ದೌರ್ಜನ್ಯ ಅಥವಾ ಯಾವುದೇ ರೀತಿಯ ಶೋಷಣೆಯನ್ನು ಸಹಿಸಬಾರದು. ಹೊರಗಿನವರು ಅಥವಾ ಮನೆಯವರೇ ಆಗಿರಲಿ ಶೋಷಣೆಯನ್ನು ಮಾಡಿದಾಗ ಇದರ ವಿರುದ್ಧ ಧ್ವನಿ ಎತ್ತಬೇಕೆಂದು ಸ್ವಾತಿ ಮಲಿವಾಲ್ ಹೇಳಿದರು.