ನವದೆಹಲಿ:ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಕೋವಿಡ್ -19 ಲಸಿಕೆಗಳ ಮಿಶ್ರಣ ಡೋಸ್ (Mixing doses) ಕುರಿತ ಅಧ್ಯಯನಕ್ಕೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಅನುಮೋದನೆ ನೀಡಿದೆ.
ಮಿಶ್ರಣ ಡೋಸ್ಗಳ ಅಧ್ಯಯನ ಮತ್ತು ಅದರ ಕ್ಲಿನಿಕಲ್ ಪ್ರಯೋಗಗಳನ್ನು ತಮಿಳುನಾಡಿನ ವೆಲ್ಲೂರಿನ ಕ್ರಿಶ್ಚಿಯನ್ ವೈದ್ಯಕೀಯ ಕಾಲೇಜು (ಸಿಎಂಸಿ) ಯಲ್ಲಿ ನಡೆಯಲಿದೆ.
ಕಳೆದ ತಿಂಗಳು ಡಿಸಿಜಿಐನ ತಜ್ಞರ ಸಮಿತಿಯು ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳನ್ನು ಮಿಶ್ರಣ ಮಾಡುವ ಕುರಿತು ಅಧ್ಯಯನ ನಡೆಸಲು ಶಿಫಾರಸು ಮಾಡಿತು. ಸಿಎಂಸಿ ಅಂತಹ ಅಧ್ಯಯನ ನಡೆಸಲು ಅನುಮತಿ ಕೋರಿದ ನಂತರ ಶಿಫಾರಸು ಮಾಡಲಾಗಿತ್ತು.
ಇದನ್ನೂಓದಿ : COVID Vaccine ಮಿಶ್ರಣದಿಂದ ಉತ್ತಮ ಫಲಿತಾಂಶ: ICMR
ಮಿಶ್ರಣ ಡೋಸ್ಗಳ ಕುರಿತು ಅಧ್ಯಯನ ನಡೆಸಲು ಅನುಮತಿ ನೀಡುವಂತೆ ಕೇಂದ್ರ ಔಷಧಗಳ ಗುಣಮಟ್ಟ ನಿಯಂತ್ರಣ ಸಂಸ್ಥೆಯ ವಿಷಯ ತಜ್ಞರ ಸಮಿತಿ (ಸಿಡಿಎಸ್ಸಿಒ) ಶಿಫಾರಸು ಮಾಡಿತ್ತು. ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಮಿಶ್ರಣದ ಅಧ್ಯಯನವು 300 ಆರೋಗ್ಯವಂತ ಸ್ವಯಂ ಸೇವಕರನ್ನು ಒಳಗೊಂಡು 4 ಹಂತದ ಕ್ಲಿನಿಕಲ್ ಟ್ರಯಲ್ಗಳ ಮೂಲಕ ನಡೆಯಲಿದೆ.
ಒಬ್ಬ ವ್ಯಕ್ತಿಗೆ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಎರಡೂ ಲಸಿಕೆಗಳ ಒಂದೊಂದು ಡೋಸ್ಗಳನ್ನು ನೀಡಬಹುದೇ, ಅದು ಯಾವ ರೀತಿ ಪರಿಣಾಮ ಬೀರಬಹುದು, ಇದರಿಂದ ಜೀವಕ್ಕೆ ಅಪಾಯವಿದೆಯೇ ಎಂಬುವುದನ್ನು ತಿಳಿದುಕೊಳ್ಳಲು ಈ ಅಧ್ಯಯನ ಮಾಡಲಾಗುತ್ತದೆ.