ಕರ್ನಾಟಕ

karnataka

ETV Bharat / bharat

20 ರಾಜ್ಯಗಳ 76 ಔಷಧ ತಯಾರಕರ ಮೇಲೆ ಡಿಸಿಜಿಐ ದಾಳಿ: 18 ಕಂಪನಿಗಳ ಲೈಸನ್ಸ್‌ ರದ್ದು

ಕಳೆದ ಎರಡು ವಾರದಲ್ಲಿ 20 ರಾಜ್ಯಗಳ 76 ಫಾರ್ಮಾ ಕಂಪನಿಗಳ ಮೇಲೆ ಡಿಸಿಜಿಐ ದಾಳಿ ನಡೆಸಿದ್ದು, 18 ಕಂಪನಿಗಳ ಪರವಾನಗಿ ರದ್ದುಗೊಳಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಉನ್ನತ ಮೂಲಗಳು ತಿಳಿಸಿವೆ.

dcgi raids
ಫಾರ್ಮಾ ಕಂಪನಿಗಳ ಮೇಲೆ ಡಿಸಿಜಿಐ ದಾಳಿ

By

Published : Mar 29, 2023, 9:58 AM IST

ನವದೆಹಲಿ: ಕಳೆದ ಎರಡು ವಾರದಿಂದೀಚೆಗೆ ನಕಲಿ ಮತ್ತು ಕಳಪೆ ಔಷಧಗಳನ್ನು ಉತ್ಪಾದಿಸುವ ಕಂಪನಿಗಳ ವಿರುದ್ಧ ಸಮರ ಸಾರಲಾಗುತ್ತಿದೆ. ಇದರ ಭಾಗವಾಗಿ, ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಮತ್ತು ಅದರ ಪ್ರಾದೇಶಿಕ ಅಧಿಕಾರಿಗಳು 20 ರಾಜ್ಯಗಳಲ್ಲಿ 76 ಫಾರ್ಮಾ ಕಂಪನಿಗಳ ಮೇಲೆ ದಾಳಿ ನಡೆಸಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

ದಾಳಿ ಬಳಿಕ 18 ಕಂಪನಿಗಳ ಪರವಾನಗಿಗಳನ್ನು ರದ್ದುಗೊಳಿಸಲಾಗಿದೆ ಎಂದು ಆರೋಗ್ಯ ಸಚಿವಾಲಯದ ಉನ್ನತ ಮೂಲಗಳು ಈಟಿವಿ ಭಾರತಕ್ಕೆ ತಿಳಿಸಿವೆ. ನಿಯಮಾವಳಿಗಳನ್ನು ಉಲ್ಲಂಘಿಸಿದ 26 ಸಂಸ್ಥೆಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಈಗ ಮೊದಲ ಹಂತದ ದಾಳಿ ನಡೆದಿದ್ದು, ರಾಷ್ಟ್ರವ್ಯಾಪಿ ಕಾರ್ಯಾಚರಣೆಗಾಗಿ ಒಟ್ಟು 203 ಕಂಪನಿಗಳನ್ನು ಗುರುತಿಸಲಾಗಿದೆ. ಮೂರು ಸಂಸ್ಥೆಗಳ ಉತ್ಪನ್ನ ಅನುಮತಿಯನ್ನ ರದ್ದುಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ದಾಳಿ ಮುಂದುವರಿಯಲಿದೆ ಎಂದು ಮೂಲಗಳು ಮಾಹಿತಿ ಒದಗಿಸಿವೆ.

ಆಂಧ್ರಪ್ರದೇಶ, ಬಿಹಾರ, ದೆಹಲಿ, ಗೋವಾ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಪುದುಚೇರಿ, ಪಂಜಾಬ್, ರಾಜಸ್ಥಾನ, ಸಿಕ್ಕಿಂ, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ, ಉತ್ತರಾಖಂಡ, ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ದಾಳಿ ನಡೆದಿದೆ.

ಇದನ್ನೂ ಓದಿ :ಮಕ್ಕಳ ಸಾವಿಗೆ ಕಾರಣವಾದ ನೋಯ್ಡಾದ ಮರಿಯನ್ ಬಯೋಟೆಕ್ ಪರವಾನಗಿ ರದ್ದು

"ನಾವು ನಕಲಿ ಮತ್ತು ಗುಣಮಟ್ಟದ್ದಲ್ಲದ ಔಷಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದೇವೆ. ಈ ಉದ್ದೇಶದಿಂದ ದಾಳಿ ನಡೆಸಲಾಗುತ್ತಿದೆ. ಕಂಪನಿಯು ಉತ್ತಮ ಗುಣಮಟ್ಟದ ಔಷಧಿಯನ್ನು ತಯಾರಿಸದಿರುವುದು ಕಂಡುಬಂದರೆ ಅದನ್ನು ಮುಚ್ಚಲಾಗುವುದು. ಈಗಾಗಲೇ 203 ಕಂಪನಿಗಳನ್ನು ಗುರುತಿಸಿದ್ದೇವೆ. ಆರಂಭದಲ್ಲಿ ಮೊದಲ ಹಂತವಾಗಿ 76 ಕಂಪನಿಗಳ ಮೇಲೆ ದಾಳಿ ಮಾಡಲಾಗಿದೆ. ಮೂರು ಸಂಸ್ಥೆಗಳ ಉತ್ಪನ್ನ ಅನುಮತಿಗಳನ್ನು ರದ್ದುಗೊಳಿಸಲಾಗಿದೆ ಮತ್ತು 26 ಇತರ ಸಂಸ್ಥೆಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಉತ್ತರಾಖಂಡ ಮತ್ತು ಗುಜರಾತ್‌ಗಳಲ್ಲಿ ನಕಲಿ ಮತ್ತು ಕಳಪೆ ಔಷಧಗಳನ್ನು ಹೆಚ್ಚಿನ ಸಂಸ್ಥೆಗಳು ಉತ್ಪಾದಿಸುತ್ತಿವೆ ಎಂದು ಮೂಲಗಳು ತಿಳಿಸಿವೆ. ಹಿಮಾಚಲ ಪ್ರದೇಶದ 70, ಉತ್ತರಾಖಂಡದ 45, ಮಧ್ಯಪ್ರದೇಶದ 23 ಮತ್ತು ಗುಜರಾತ್‌ನ 16 ಫಾರ್ಮಾ ಕಂಪನಿಗಳ ಮೇಲೆ ಶೋಧ ನಡೆದಿದೆ.

ಇದನ್ನೂ ಓದಿ :40 ಕಿ.ಮೀ ದೂರ, 29 ನಿಮಿಷ..: ಡ್ರೋನ್ ಮೂಲಕ ಔಷಧ ಸೇವೆ ಪ್ರಾರಂಭಿಸಿದ ಏಮ್ಸ್​!

ಕಳಪೆ ಗುಣಮಟ್ಟದ ಔಷಧಕ್ಕೆ ಸಂಬಂಧಿಸಿದಂತೆ ಕಳೆದ ಕೆಲವು ತಿಂಗಳುಗಳಲ್ಲಿ ಅನೇಕ ಪ್ರಕರಣಗಳು ಬೆಳಕಿಗೆ ಬಂದಿವೆ. ವಿವಿಧ ರಾಷ್ಟ್ರಗಳಿಗೆ ರಫ್ತು ಮಾಡಿದ ಭಾರತೀಯ ಔಷಧೀಯ ಉತ್ಪನ್ನಗಳು ಉತ್ತಮ ಗುಣಮಟ್ಟ ಹೊಂದಿಲ್ಲ ಎಂದು ಕಂಡುಬಂದಿದೆ. ಇತ್ತೀಚೆಗೆ ನೋಯ್ಡಾ ಮೂಲದ ಔಷಧ ಸಂಸ್ಥೆ ಮರಿಯನ್ ಬಯೋಟೆಕ್‌ನ ಕೆಮ್ಮಿನ ಸಿರಪ್ ಡಾಕ್ -1 ಅನ್ನು ಸೇವಿಸಿ ಉಜ್ಬೇಕಿಸ್ತಾನ್‌ನಲ್ಲಿ 18 ಮಕ್ಕಳು ಸಾವನ್ನಪ್ಪಿದ ಪ್ರಕರಣ ಬೆಳಕಿಗೆ ಬಂದಿತ್ತು.

ಇದನ್ನೂ ಓದಿ :'ಜನ್ ಔಷಧ ದಿವಸ್': ಸಾರ್ವಜನಿಕ ಹಿತಾಸಕ್ತಿಗಾಗಿ ಜನರಿಕ್ ಔಷಧಗಳ ಬಗ್ಗೆ ಜಾಗೃತಿ

ABOUT THE AUTHOR

...view details