ಹೈದರಾಬಾದ್ : ಶಿಕ್ಷಣ, ವೈದ್ಯಕೀಯ ಕ್ಷೇತ್ರ ಮತ್ತು ವಿವಿಧ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಸಂಶೋಧನೆಗಳು ಮತ್ತು ಭವಿಷ್ಯದಲ್ಲಿ ಬರುವ ವಿನೂತನ ಆವಿಷ್ಕಾರಗಳು ಮನುಷ್ಯನ ಜೀವಿತಾವಧಿಯನ್ನು ಹೆಚ್ಚಿಸುವ ಸಾಧ್ಯತೆಗಳಿವೆ ಎಂದು ಇಸ್ರೋ ಅಧ್ಯಕ್ಷ ಡಾ ಸೋಮನಾಥ್ ಹೇಳಿದರು.
ಶುಕ್ರವಾರ ಇಲ್ಲಿನ ಜವಾಹರ್ಲಾಲ್ ನೆಹರು ತಾಂತ್ರಿಕ ವಿಶ್ವವಿದ್ಯಾಲಯ (ಜೆಎನ್‌ಟಿಯು)ದಲ್ಲಿ ನಡೆದ 12ನೇ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಶಿಕ್ಷಣ, ವೈದ್ಯಕೀಯ ಮುಂತಾದ ಕ್ಷೇತ್ರಗಳಲ್ಲಿ ನಡೆಯುವ ಸಂಶೋಧನೆ ಮತ್ತು ಆವಿಷ್ಕಾರಗಳಿಂದ ಮನುಷ್ಯನ ಜೀವಿತಾವಧಿ ಹೆಚ್ಚಳವಾಗುವ ಸಾಧ್ಯತೆ ಇದೆ. ನಮ್ಮ ಹಾನಿಗೊಳಗಾದ ಅಂಗಗಳು ಮತ್ತು ಸಾಯುತ್ತಿರುವ ಜೀವಕೋಶಗಳನ್ನು ಬದಲಾಯಿಸುವ ಮೂಲಕ ನಾವು ಸುಮಾರು 200 ರಿಂದ 300 ವರ್ಷಗಳವರೆಗೆ ಬದುಕಬಹುದು. ಸ್ವಾತಂತ್ರ್ಯ ಬಂದಾಗ ಮನುಷ್ಯನ ಸರಾಸರಿ ಜೀವಿತಾವಧಿ 35 ವರ್ಷ ಇತ್ತು. ಇದೀಗ ಈ ಜೀವಿತಾವಧಿ 70 ವರ್ಷವಾಗಿದೆ ಎಂದು ಹೇಳಿದರು.
ಈ ವರ್ಷ ನಾವು ಪಿಎಸ್‌ಎಲ್‌ವಿ ಮತ್ತು ಜಿಎಸ್‌ಎಲ್‌ವಿ ಮೂಲಕ ಕೆಲವು ನೌಕೆಗಳನ್ನು ಭೂಮಿಯ ಕಕ್ಷೆಗೆ ಕಳುಹಿಸುತ್ತಿದ್ದೇವೆ. ಇವುಗಳ ಸಹಾಯದಿಂದ ಚಂಡಮಾರುತ ಯಾವಾಗ ಬರುತ್ತದೆ, ಮಳೆ ಯಾವಾಗ ಮತ್ತು ಎಲ್ಲಿ ಬರುತ್ತವೆ ಎಂಬುದನ್ನು ನಿಖರವಾಗಿ ತಿಳಿಯಲು ಸಾಧ್ಯವಾಗುತ್ತದೆ. ಈ ವರ್ಷದೊಳಗೆ ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ 'ಮಿಷನ್ ಗಗನ್ ಯಾನ್' ಪೂರ್ಣಗೊಳಿಸಲಿದ್ದೇವೆ ಎಂದು ತಿಳಿಸಿದರು.
'ವಿದ್ಯಾರ್ಥಿಗಳು ಬಾವಿಯಲ್ಲಿರುವ ಕಪ್ಪೆಯಂತಿರಬಾರದು. ಕೃತಕ ಬುದ್ಧಿಮತ್ತೆ ಮತ್ತು ಮಿಷನ್ ಲರ್ನಿಂಗ್ ಈಗಾಗಲೇ ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಇದನ್ನು ವಿದ್ಯಾರ್ಥಿಗಳು ಅರಿಯಬೇಕು. ರೋಬೋಟಿಕ್ ತಂತ್ರಜ್ಞಾನದಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳು ಆತ್ಯಾಧುನಿಕ ತಂತ್ರಜ್ಞಾನ ಬಳಸಿ ರೋಬೋಟ್ಗಳನ್ನು ತಯಾರಿಸಿದರೆ ಮುಂದೆ ಇಸ್ರೋ ನಡೆಸುವ ಮಂಗಳ ಮತ್ತು ಶುಕ್ರ ಗ್ರಹದ ಯೋಜನೆಗಳಲ್ಲಿ ಬಳಸಿಕೊಳ್ಳಲಾಗುವುದು ಎಂದು ಸೋಮನಾಥ್ ಹೇಳಿದರು. ಜವಾಹರ್ಲಾಲ್ ನೆಹರು ತಾಂತ್ರಿಕ ವಿಶ್ವವಿದ್ಯಾಲಯದಿಂದ ಡಾ.ಸೋಮನಾಥ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು. ಜೊತೆಗೆ 54 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು.