ನವದೆಹಲಿ:ಮಹರ್ಷಿ ದಯಾನಂದ ಸರಸ್ವತಿ ಅವರ 200 ನೇ ಜನ್ಮದಿನದ ಸ್ಮರಣಾರ್ಥ ಒಂದು ವರ್ಷದ ಆಚರಣೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಇಲ್ಲಿನ ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪ್ರಧಾನಿಯವರು ಪೂಜೆ ಮತ್ತು ಯಜ್ಞವನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಜಿ ಕಿಶನ್ ರೆಡ್ಡಿ, ಅರ್ಜುನ್ ರಾಮ್ ಮೇಘವಾಲ್ ಮತ್ತು ಮೀನಾಕ್ಷಿ ಲೇಖಿ ಉಪಸ್ಥಿತರಿದ್ದರು.
ಫೆಬ್ರವರಿ 12, 1824 ರಂದು ಜನಿಸಿದ ಮಹರ್ಷಿ ದಯಾನಂದ ಸರಸ್ವತಿ ಅವರು ಸಾಮಾಜಿಕ ಸುಧಾರಕರಾಗಿದ್ದರು. ಅವರು ಆಗ ಪ್ರಚಲಿತದಲ್ಲಿದ್ದ ಸಾಮಾಜಿಕ ಅಸಮಾನತೆಗಳನ್ನು ನಿವಾರಿಸಲು 1875 ರಲ್ಲಿ ಆರ್ಯ ಸಮಾಜವನ್ನು ಸ್ಥಾಪಿಸಿದರು. ಆರ್ಯ ಸಮಾಜವು ಸಾಮಾಜಿಕ ಸುಧಾರಣೆಗಳು ಮತ್ತು ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ದೇಶದ ಸಾಂಸ್ಕೃತಿಕ ಮತ್ತು ಸಾಮಾಜಿಕ ಜಾಗೃತಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸಮಾಜ ಸುಧಾರಕರು ಮತ್ತು ಪ್ರಮುಖ ವ್ಯಕ್ತಿಗಳ ಸಾಧನೆಗಳನ್ನು ಆಚರಿಸಲು ಸರ್ಕಾರವು ಬದ್ಧವಾಗಿದೆ. ರಾಷ್ಟ್ರಮಟ್ಟದಲ್ಲಿ ಈವರೆಗೆ ಹೆಚ್ಚು ಪ್ರಚಾರ ಸಿಗದ ಮಹನೀಯರ ಬಗ್ಗೆ ತಿಳಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಪ್ರಧಾನ ಮಂತ್ರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನವನ್ನು ಜನಜಾತಿಯ ಗೌರವ್ ದಿವಸ್ ಎಂದು ಘೋಷಿಸುವುದರಿಂದ ಹಿಡಿದು ಶ್ರೀ ಅರಬಿಂದೋ ಅವರ 150 ನೇ ಜನ್ಮ ದಿನಾಚರಣೆಯ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸುವವರೆಗೆ ಪ್ರಧಾನಿ ಮೋದಿ ಅಂತಹ ಉಪಕ್ರಮಗಳನ್ನು ತಾವೇ ಮುಂದಾಗಿ ನಡೆಸುತ್ತಿದ್ದಾರೆ.
ಸಮಾಜ ಸುಧಾರಕ ಮಹರ್ಷಿ ದಯಾನಂದ ಸರಸ್ವತಿ: ಸ್ವಾಮಿ ದಯಾನಂದ ಸರಸ್ವತಿಯವರು ಸಮಾಜ ಸುಧಾರಣೆ ಮತ್ತು ವಿಮೋಚನೆಯ ಬೆಳಕನ್ನು ಹರಡಿದರು ಮಾತ್ರವಲ್ಲದೆ ರಾಷ್ಟ್ರ ನಿರ್ಮಾಣದಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. ಅವರ ಕೀರ್ತಿ ಯಾವುದೇ ಒಂದು ಯುಗಕ್ಕೆ ಸೀಮಿತವಾಗಿಲ್ಲ. ಅವರ ಜನಕಲ್ಯಾಣ ಚಿಂತನೆಯು ಸಾರ್ವತ್ರಿಕವಾಗಿದೆ ಮತ್ತು ಯುಗಯುಗಾಂತರಗಳಿಗೂ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಲೇ ಇರುತ್ತದೆ. ಸ್ವಾಮಿ ದಯಾನಂದ ಸರಸ್ವತಿ ಅವರು ಜ್ಞಾನದ ಬೆಳಕಾಗಿದ್ದಾರೆ.
ಅವರು ತಮ್ಮ ಆಧ್ಯಾತ್ಮಿಕ ಶಕ್ತಿ ಮತ್ತು ಸಾಂಸ್ಕೃತಿಕ ಏಕತೆಯಿಂದ ಸಾರ್ವಜನಿಕರಿಗೆ ಶಕ್ತಿಯನ್ನು ಒದಗಿಸಿದರು. ಮೂಢನಂಬಿಕೆ, ಸಂಪ್ರದಾಯವಾದ, ವಿವಿಧ ರೀತಿಯ ಆಡಂಬರ ಮತ್ತು ದೇಶದಲ್ಲಿ ಪ್ರಚಲಿತದಲ್ಲಿರುವ ಎಲ್ಲಾ ಅಮಾನವೀಯ ಆಚರಣೆಗಳನ್ನು ವಿರೋಧಿಸಿದ ಮಹಾನ್ ಸಂತರು ಮತ್ತು ಮಹಾಪುರುಷರಲ್ಲಿ ಅವರು ಅಗ್ರಗಣ್ಯರಾಗಿದ್ದಾರೆ. ಅವರು ಆಧುನಿಕ ಭಾರತದ ಮಹಾನ್ ಚಿಂತಕ, ಸಮಾಜ ಸುಧಾರಕ, ಕ್ರಾಂತಿಕಾರಿ ಧಾರ್ಮಿಕ ಶಿಕ್ಷಕ ಮತ್ತು ದೇಶಭಕ್ತರಾಗಿದ್ದರು. ಹಿಂದಿಯನ್ನು ರಾಷ್ಟ್ರೀಯ ಭಾಷೆಯಾಗಿ ಗುರುತಿಸುವಲ್ಲಿ, ಸ್ಥಳೀಯ ಜಾಗೃತಿ ಮತ್ತು ಹಿಂದೂ ಧರ್ಮದ ಉನ್ನತಿಗೆ ಮತ್ತು ಅದರ ಸ್ವಾಭಿಮಾನವನ್ನು ಜಾಗೃತಗೊಳಿಸುವಲ್ಲಿ ಅವರು ನೀಡಿದ ಮಹತ್ವದ ಕೊಡುಗೆಗಾಗಿ ಭಾರತೀಯ ಸಾರ್ವಜನಿಕರು ಯಾವಾಗಲೂ ಸ್ವಾಮೀಜಿಗೆ ಋಣಿಯಾಗಿರುತ್ತಾರೆ.
ಸ್ವಾಮಿ ದಯಾನಂದ ಸರಸ್ವತಿಯವರು 1824 ರ ಫೆಬ್ರವರಿ 12 ರಂದು ಗುಜರಾತಿನ ಕಾಠಿಯಾವಾಡದ ಪ್ರದೇಶದ ಟಂಕ್ರಾ ಎಂಬ ಸ್ಥಳದಲ್ಲಿ ಜನಿಸಿದರು. ದಯಾನಂದ ಸರಸ್ವತಿ ಅವರ ನಿಜವಾದ ಹೆಸರು ಮೂಲಶಂಕರ. ಅವರ ಆರಂಭಿಕ ಜೀವನವು ತುಂಬಾ ಆರಾಮದಾಯಕವಾಗಿತ್ತು. ನಂತರ ಪಂಡಿತರಾಗಲು ಅವರು ಸಂಸ್ಕೃತ, ವೇದಗಳು, ಶಾಸ್ತ್ರಗಳು ಮತ್ತು ಇತರ ಧಾರ್ಮಿಕ ಪುಸ್ತಕಗಳನ್ನು ಅಧ್ಯಯನ ಮಾಡಿದರು.
ಇದನ್ನೂ ಓದಿ: ಮೈಸೂರು : ಸಾವಿರಾರು ಭಕ್ತರಿಂದ ಭಗವದ್ಗೀತಾ ಪಾರಾಯಣ