ನವದೆಹಲಿ: ಸದನದೊಳಗೆ ಪ್ರತಿಭಟನೆ ನಡೆಸಿ ಕಲಾಪಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ 24 ಕ್ಕೂ ಹೆಚ್ಚು ಸಂಸದರನ್ನು ಅಧಿವೇಶನದಿಂದ ಅಮಾನತುಗೊಳಿಸಲಾಗಿದೆ. ಅಮಾನತು ಕ್ರಮ ವಿರೋಧಿಸಿ 50 ಗಂಟೆಗಳ ಪ್ರತಿಭಟನೆ ಕೈಗೊಂಡಿರುವ ಸಂಸದರು ಸಂಸತ್ತಿನ ಪ್ರವೇಶ ದ್ವಾರದ ಮುಂಭಾಗ ಧರಣಿ ಮುಂದುವರೆಸಿದ್ದಾರೆ.
ಮೊದಲನೇ ದಿನ ಸಂಸತ್ತಿನ ಗಾಂಧಿ ಪ್ರತಿಮೆ ಬಳಿ ಆಹೋರಾತ್ರಿ ಪ್ರತಿಭಟನೆ ನಡೆಸಿದ್ದರು. ಆದ್ರೆ ಎರಡನೇ ದಿನವಾದ ನಿನ್ನೆ ಭಾರಿ ಮಳೆಯಿಂದಾಗಿ ಸಂಸತ್ ಪ್ರವೇಶ ದ್ವಾರದ ಬಳಿ ಧರಣಿ ನಡೆಸಿದರು. ಕೆಲ ಸಂಸದರು ಸಾಮಾಜಿಕ ಜಾಲತಾಣದಲ್ಲಿ ರಾತ್ರಿ ಸೂರಿಲ್ಲದೆ ನೆಲದ ಮೇಲೆ ಸೊಳ್ಳೆ ಪರದೆಯೊಳಗೆ ನಿದ್ರಿಸಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ತೃಣಮೂಲ ಸಂಸದ ಡೆರೆಕ್ ಒ ಬ್ರೇನ್ ಮಧ್ಯರಾತ್ರಿ 1 ಗಂಟೆಗೆ ಟ್ವೀಟ್ ಮಾಡಿ, ಜಿಎಸ್ಟಿ, ಬೆಲೆ ಏರಿಕೆ ಕುರಿತು ಚರ್ಚೆ ಮಾಡಿದ್ದಕ್ಕಾಗಿ 27 ಸಂಸದರನ್ನು ಅಮಾನತು ಮಾಡಲಾಗಿದೆ. ಕೂಡಲೇ ಅಮಾನತು ಆದೇಶ ರದ್ದುಗೊಳಿಸುವಂತೆ ಒತ್ತಾಯಿಸಿದ್ದಾರೆ. ಪ್ರಧಾನಿ ಮೋದಿಯವರು 2014 ರಲ್ಲಿ ಸಂಸತ್ತಿಗೆ ಆಗಮಿಸಿದಾಗ ನೀಡಿದ ಭರವಸೆಯನ್ನು ಪ್ರತಿಭಟನಾಕಾರರು ನೆನಪಿಸಲು ಪ್ರಯತ್ನಿಸಿದ್ದರು ಎಂದಿದ್ದಾರೆ. ಜೊತೆಗೆ ರಾಜ್ಯಸಭಾ ಸದಸ್ಯ ಸಂಜಯ್‌ಸಿಂಗ್ ರಾತ್ರಿ ವೇಳೆ ಹೇಳಿದ ಹಾಡೊಂದನ್ನು ಶೇರ್ ಮಾಡಿದ್ದಾರೆ.