ಜೈಪುರ: ದೌಸಾದಲ್ಲಿ ವೈದ್ಯೆ ಅರ್ಚನಾ ಶರ್ಮಾ ಆತ್ಮಹತ್ಯೆ ಪ್ರಕರಣದಲ್ಲಿ ರಾಜಕಾರಣಿಗಳ ಆರೋಪ, ಪ್ರತ್ಯಾರೋಪಗಳ ನಡುವೆಯೇ ರಾಜಸ್ಥಾನ ಸರ್ಕಾರ ಹಾಗೂ ಪೊಲೀಸರ ಕಾರ್ಯವೈಖರಿಯನ್ನು ಪ್ರಶ್ನಿಸಿ ಬಿಜೆಪಿ ಮುಖಂಡರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೀಗ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಪೊಲೀಸರು ಜೈಪುರದಲ್ಲಿ ಬಿಜೆಪಿ ನಾಯಕ ಜಿತೇಂದ್ರ ಗೋಥ್ವಾಲ್ ಅವರನ್ನು ವಶಕ್ಕೆ ಪಡೆದಿದ್ದಾರೆ.
ಗೋಥ್ವಾಲ್ ಅವರ ನಿವಾಸದಲ್ಲಿ ವಶಕ್ಕೆ ತೆಗೆದುಕೊಂಡ ನಂತರ ವಿಚಾರಣೆಗಾಗಿ ದೌಸಾ ಲಾಲ್ಸೋಟ್‌ಗೆ ಕರೆದೊಯ್ದಿದ್ದಾರೆ. ಪ್ರಕರಣದ ತನಿಖೆ ಹೆಸರಿನಲ್ಲಿ ಗೋಥ್ವಾಲ್ ಅವರನ್ನು ವಶಕ್ಕೆ ಪಡೆಯುವ ಸಲುವಾಗಿ ಬುಧವಾರ ರಾತ್ರಿ 1:45 ರ ಸುಮಾರಿಗೆ ಪೊಲೀಸರು ಸಾಮಾನ್ಯ ಉಡುಪಿನಲ್ಲಿ ಜೈಪುರದ ಬಿಜೆಪಿ ನಾಯಕನ ನಿವಾಸಕ್ಕೆ ಆಗಮಿಸಿದ್ದರು.
ಈ ವೇಳೆ ಭಾರಿ ಸಂಖ್ಯೆಯಲ್ಲಿ ಬಿಜೆಪಿ ಮುಖಂಡರು ಜಮಾಯಿಸಿ ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಡಾ.ಅರುಣ್ ಚತುರ್ವೇದಿ ಕೂಡ ಅಲ್ಲಿಗೆ ಆಗಮಿಸಿ ಪೊಲೀಸರ ಕಾರ್ಯಶೈಲಿಯ ಬಗ್ಗೆ ಕಿಡಿಕಾರಿದ್ದಾರೆ. ಇತ್ತೀಚೆಗಷ್ಟೇ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಜಿತೇಂದ್ರ ಗೋಥ್ವಾಲ್ ಅವರು ವೈದ್ಯೆ ಅರ್ಚನಾ ಶರ್ಮಾ ಆತ್ಮಹತ್ಯೆ ಪ್ರಕರಣದಲ್ಲಿ ಸಂತ್ರಸ್ತ ಕುಟುಂಬದೊಂದಿಗೆ ಲಾಲ್ಸೋಟ್‌ನಲ್ಲಿ ಧರಣಿ ನಡೆಸುವ ಮೂಲಕ ಆರ್ಥಿಕ ಪರಿಹಾರ ಸೇರಿದಂತೆ ಹಲವು ಬೇಡಿಕೆಗಳಿಗೆ ಒತ್ತಾಯಿಸಿದ್ದರು.