ಕಾಮರೆಡ್ಡಿ(ತೆಲಂಗಾಣ):ಗುರುತು ಪರಿಚಯ ಹೆಚ್ಚಾಗಿ ಇಲ್ಲದವರನ್ನು ಅತೀ ಹೆಚ್ಚಾಗಿ ನಂಬಬಾರದು. ನಂಬಿದ್ರೆ ಆಗುವ ಅನಾಹುತಗಳೇ ಬೇರೆಯಾಗಿರುತ್ತವೆ. ಅದಕ್ಕೆ ಸಾಕ್ಷಿ ಎಂಬಂತೆ ಹೈದರಾಬಾದ್ನಲ್ಲೊಂದು ಘಟನೆ ನಡೆದಿದೆ. ಇದು ಒಂಥರಾ ಡಿಜಿಟಲ್ ಮೋಸ ಎಂದ್ರೆ ತಪ್ಪಾಗಲಾರದು.
ಏನಿದು ಘಟನೆ: ಜಿಲ್ಲೆಯ ಲಿಂಗಂಪೇಟ ತಾಲೂಕಿನ ಬೋನಲ್ ತಾಂಡಾದ ಚಿಂತಲಗುಟ್ಟದ ಬಾನೋತು ಸುರೇಶ್ ಅಲಿಯಾಸ್ ಸನ್ನಿ (22) ಹೈದರಾಬಾದ್‌ನ ಜಗದ್ಗಿರಿಗುಟ್ಟಾ ವೆಂಕಟೇಶ್ವರ ನಗರದಲ್ಲಿ ವಾಸವಾಗಿದ್ದು, ಸ್ವಿಗ್ಗಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾನೆ. ಮುಸಾಪೇಟಾದ ಶ್ರೀ ಹರಿನಗರದಲ್ಲಿ ವಾಸವಾಗಿರುವ ವಿದ್ಯಾರ್ಥಿನಿ ಸುರೇಶ್‌ಗೆ ಇನ್‌ಸ್ಟಾಗ್ರಾಂನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಾರೆ. ಸುರೇಶ್ ಆಕೆಯ ರಿಕ್ವೆಸ್ಟ್ನ್ನು ಸ್ವೀಕರಿಸಿದ್ದಾನೆ. ಬಳಿಕ ಇಬ್ಬರು ಇನ್ಸ್ಟಾಗ್ರಾಂನಲ್ಲಿ ಚಾಟ್ ಮಾಡಲು ಪ್ರಾರಂಭಿಸಿದರು.
ಓದಿ:ವಿಡಿಯೋ: ನಿಂಬೆಗೂ ಬಂತು ಬಂಗಾರದ ಬೆಲೆ; 50 ಕೆಜಿ ಕದ್ದು ಪರಾರಿಯಾದ ಕಳ್ಳ
ಕಳೆದ ತಿಂಗಳ 20ರಂದು ಆಕೆಯ ಪೋಷಕರು ಬೇರೆ ಊರಿಗೆ ಹೋದಾಗ ಫೋನ್ ಮಾಡಿ ಸುರೇಶ್ನನ್ನು ಯುವತಿ ಮನೆಗೆ ಕರೆದಿದ್ದಾಳೆ. ಈ ವೇಳೆ ಸುರೇಶ್ನನ್ನು ಮನೆಯಲ್ಲಿ ಕೂರಿಸಿ ಕೂಲ್ಡ್ರಿಂಕ್ಸ್ ತರಲು ಶಾಪ್ಗೆ ಹೋಗಿದ್ದಾಳೆ. ಆಕೆ ಹೊರಗೆ ಹೋದಾಗ ಸುರೇಶ್ ಲಾಕರ್‌ನಲ್ಲಿದ್ದ ಚಿನ್ನಾಭರಣಗಳನ್ನು ಕದ್ದು ಜೇಬಿನಲ್ಲಿ ಬಚ್ಚಿಟ್ಟುಕೊಂಡಿದ್ದ. ಹುಡುಗಿಯೊಂದಿಗೆ ಸ್ವಲ್ಪ ಸಮಯ ಮಾತನಾಡಿ ನಂತರ ಅವನು ಮನೆಯಿಂದ ಹೋಗಿದ್ದ.
ಏ.24ಕ್ಕೆ ಆಕೆಯ ಪೋಷಕರು ಮನೆಗೆ ವಾಪಸ್ಸಾಗಿದ್ದಾರೆ. ಕೆಲ ದಿನಗಳ ಬಳಿಕ ಮನೆಯಲ್ಲಿರುವ ಚಿನ್ನ ಮತ್ತು ನಗದು ಮಾಯವಾಗಿರುವುದು ಪತ್ತೆಯಾಗಿದೆ. ಮೇ 1ರಂದು ಕುಕಟ್ಪಲ್ಲಿ ಪೊಲೀಸ್ ಠಾಣೆಗೆ ತೆರಳಿದ ಪೋಷಕರು 200 ಗ್ರಾಂ ಚಿನ್ನಾಭರಣ ಹಾಗೂ 10 ಸಾವಿರ ನಗದು ಕಳ್ಳತನವಾಗಿದೆ ಎಂದು ದೂರು ನೀಡಿದ್ದಾರೆ.
ಪೊಲೀಸರು ಮನೆಯಲ್ಲಿದ್ದವರನ್ನು ವಿಚಾರಣೆ ನಡೆಸುತ್ತಿದ್ದಾಗ ಸುರೇಶ್ ಬಂದು ಹೋಗಿದ್ದಾಗಿ ವಿದ್ಯಾರ್ಥಿನಿ ಪೊಲೀಸರಿಗೆ ತಿಳಿಸಿದ್ದಾಳೆ. ಬುಧವಾರ ಬೆಳಗ್ಗೆ ಆತನನ್ನು ವಶಕ್ಕೆ ಪಡೆದು ಬಾಯ್ಬಿಡಿಸಿದಾಗ ಚಿನ್ನಾಭರಣ ಕದ್ದಿರುವ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ. ಬಳಿಕ ಆತನ ಬಳಿಯಿದ್ದ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡರು. ಈ ಬಗ್ಗೆ ಕುಕಟ್ಪಲ್ಲಿ ಎಸಿಪಿ ಎ.ಚಂದ್ರಶೇಖರ್ ಮಾಧ್ಯಮದವರಿಗೆ ಮಾಹಿತಿ ನೀಡಿದರು.