ಜಮುಯಿ (ಬಿಹಾರ): ಕಳೆದ ಕೆಲ ದಶಕಗಳ ಹಿಂದೆ ದೇಶದಲ್ಲಿ ನಕ್ಸಲರ ಸಂಖ್ಯೆ ಅಧಿಕವಾಗಿತ್ತು. ವ್ಯವಸ್ಥೆ ವಿರುದ್ಧ ಬಂಡೆದ್ದು ತಮ್ಮದೇ ಆದ ಕ್ರಾಂತಿ, ಹಿಂಸಾಚಾರದ ಮಾರ್ಗದಲ್ಲಿ ನಕ್ಸಲೀಯರು ಸಾಗುತ್ತಿದ್ದರು. ಇದರಿಂದ ಜನರಲ್ಲಿ ಭಯ ಭೀತಿಯ ವಾತಾವರಣ ಸೃಷ್ಟಿಸುತ್ತಿದ್ದರು. ಇಂತಹದ್ದೊಂದು ನಕ್ಸಲ್ ಕೃತ್ಯದಲ್ಲಿ ತೊಡಗಿದ್ದ ನಾಯಕ ಸ್ಫೋಟಿಸಿದ ಶಾಲೆಯಲ್ಲೇ ಈಗ ಆತನ ಸೊಸೆ ಶಿಕ್ಷಕಿಯಾಗಿ ಮಕ್ಕಳಿಗೆ ಜ್ಞಾನಾರ್ಜನೆ ಮಾಡಿಸುತ್ತಿದ್ದಾರೆ.
ಹೌದು, ಬಿಹಾರದ ಜಮುಯಿ ಜಿಲ್ಲೆಯಲ್ಲಿ ನಕ್ಸಲ್ ನಾಯಕ ಬಾಳೇಶ್ವರ ಕೊಡ ಎಂಬ ಹೆಸರು ಕೇಳಿದ ತಕ್ಷಣ ಜನ ನಡುಗುತ್ತಿದ್ದರು. 2007ರಲ್ಲಿ ಕುಖ್ಯಾತ ನಕ್ಸಲೀಯರಲ್ಲಿ ಬಾಳೇಶ್ವರ ಕೊಡ ಒಬ್ಬನಾಗಿದ್ದ. ಹೀಗೆ ಒಂದು ದಿನ ವರಹತ್ ಪೊಲೀಸ್ ಠಾಣಾ ವ್ಯಾಪ್ತಿಯ ನಕ್ಸಲ್ ಪೀಡಿತ ಪ್ರದೇಶವಾದ ಚೋರ್ಮರದ ಸರ್ಕಾರಿ ಶಾಲೆಯನ್ನು ಬಾಳೇಶ್ವರ ಕೊಡ ಸ್ಫೋಟಿಸಿದ್ದ. ಈ ಸ್ಫೋಟದಿಂದ ಇಡೀ ಶಾಲೆ ಹಾಳಾಗಿತ್ತು. ಆದರೆ, ಇದೇ ಶಾಲೆಯ ಸಂಪೂರ್ಣವಾಗಿ ಚಿತ್ರಣ ಬದಲಾಗಿದೆ.
ಮಾವ ಸ್ಫೋಟಿಸಿದ ಶಾಲೆಯಲ್ಲಿ ಸೊಸೆ ಶಿಕ್ಷಕಿ: ಈ ಸರ್ಕಾರಿ ಶಾಲೆಯ ಕಟ್ಟಡವನ್ನು ಪುನರ್ ನಿರ್ಮಾಣ ಮಾಡಲಾಗಿದೆ. ನಕ್ಸಲ್ ನಾಯಕ ಬಾಳೇಶ್ವರ ಕೊಡ ಅವರ ಸೊಸೆ ರಂಜುದೇವಿ ಇದೇ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ಚೋರ್ಮರ ಪ್ರಾಥಮಿಕ ಶಾಲೆಯಲ್ಲಿ 186 ಮಕ್ಕಳು ದಾಖಲಾಗಿದ್ದಾರೆ. ಶಾಲೆಗೆ ಪ್ರತಿದಿನವೂ ಮಕ್ಕಳು ಬರುತ್ತಿದ್ದಾರೆ.
ಈ ಶಾಲೆಯಲ್ಲಿ ಸಂಪೂರ್ಣ ಸಮರ್ಪಣಾ ಭಾವದಿಂದ ರಂಜುದೇವಿ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದಾರೆ. ನಾನು ಈಗ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಕಲಿಸುತ್ತಿದ್ದೇನೆ. ಇದರಿಂದ ಸಮಾಜದಲ್ಲಿ ನನ್ನ ಖ್ಯಾತಿಯೂ ಹೆಚ್ಚಾಗಿದೆ. ಮಕ್ಕಳು ತಮ್ಮ ಜೀವನದಲ್ಲಿ ಮುನ್ನಡೆಯಲು ಶಿಕ್ಷಣ ಬಹಳ ಮುಖ್ಯ ಎನ್ನುತ್ತಾರೆ ರಂಜುದೇವಿ.
ಪೊಲೀಸರಿಗೆ ಶರಣಾದ ಬಾಳೇಶ್ವರ ಕೊಡ:ಪ್ರಮುಖವಾದ ವಿಷಯ ಎಂದರೆ ಬಾಳೇಶ್ವರ ಕೊಡ ತನ್ನ ಇಬ್ಬರು ಸಹಚರರೊಂದಿಗೆ 2022ರ ಜೂನ್ನಲ್ಲಿ ಪೊಲೀಸರಿಗೆ ಶರಣಾಗಿದ್ದಾನೆ. ಈತನ ಶರಣಾಗತಿಯ ನಂತರ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಈಗ ಮಕ್ಕಳನ್ನು ಶಾಲೆಗೆ ಕಳುಹಿಸಲು ಮುಂದಾಗಿದ್ದಾರೆ. ಮಾವ ಬಾಳೇಶ್ವರನ ಶರಣಾಗತಿಯಲ್ಲಿ ರಂಜುದೇವಿ ಪಾತ್ರವೂ ದೊಡ್ಡದಿದೆ. ಶರಣಾಗತರಾಗಿ ಮುಖ್ಯವಾಹಿನಿಗೆ ಮರಳುವಂತೆ ಮಾವನ ಮನವೊಲಿಸಿದ್ದು ಕೂಡ ಇದೇ ರಂಜುದೇವಿ.