ಹೊಸಿಯಾರ್‌ಪುರ(ಪಂಜಾಬ್):ವಿವಾಹೇತರ ಸಂಬಂಧಕ್ಕೆ ಅಡ್ಡಿಯಾಗುತ್ತಾರೆ ಎಂದು ಪ್ರಿಯಕರನೊಂದಿಗೆ ಸೇರಿಕೊಂಡು ಅತ್ತೆ - ಮಾವನಿಗೆ ಸೊಸೆ ಬೆಂಕಿ ಇಟ್ಟಿದ್ದಾಳೆ. 2022ರ ಮೊದಲ ದಿನವೇ ದುಷ್ಕೃತ್ಯ ಮೆರೆದಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಪಂಜಾಬ್ನ ಹೊಸಿಯಾರ್‌ಪುರದ ಜಜಾ ಎಂಬಲ್ಲಿ ಪ್ರಕರಣ ನಡೆದಿದೆ.
ಹೊಸಿಯಾರ್‌ಪುರ ಪೊಲೀಸರು ಮನದೀಪ್ ಕೌರ್ ಮತ್ತು ಆಕೆಯ ಪ್ರಿಯಕರ ಜಸ್ಮೀತ್ ಸಿಂಗ್ ಎಂಬುವರನ್ನು ಬಂಧಿಸಿದ್ದಾರೆ. ಜ .1ರಂದು ವೃದ್ಧ ದಂಪತಿಯಾದ ಮಾಜಿ ಸೈನಿಕ ಜಸ್ವಂತ್ ಸಿಂಗ್ ಮತ್ತು ಪತ್ನಿ ಗುರ್ಮೀತ್ ಕೌರ್ ಅವರನ್ನು ಮಲಗುವ ಕೋಣೆಯಲ್ಲೇ ಕೊಲೆ ಮಾಡಿ, ಬೆಂಕಿ ಹಚ್ಚಿ ದುಷ್ಕೃತ್ಯ ಮೆರೆದಿದ್ದರು.
ಹಗ್ಗದಿಂದ ಕಟ್ಟಿ ಹಾಕಿರುವ ನಾಟಕ:
ಪತಿ ರವೀಂದರ್ ಸಿಂಗ್ ಮನೆಯಿಂದ ಹೊರ ಹೋಗಿದ್ದ ಸಂದರ್ಭವನ್ನೇ ಬಳಸಿಕೊಂಡ ಕೌರ್, ಪ್ರಿಯಕರನ ಜೊತೆ ಸೇರಿ ಹತ್ಯೆ ಮಾಡಿದ್ದಳು. ರವೀಂದರ್ ರಾತ್ರಿ ಮನೆಗೆ ಬಂದಾಗ ಬಾಗಿಲು ಲಾಕ್ ಆಗಿತ್ತಲ್ಲದೇ, ಎಷ್ಟೇ ಬಡಿದರೂ ಒಳಗಿನಿಂದ ಯಾರೂ ಬಾಗಿಲು ತೆರೆದಿಲ್ಲ.
ಬಳಿಕ ರವೀಂದರ್ ಮನೆಯ ಗೋಡೆ ಹತ್ತಿ ಒಳ ಪ್ರವೇಶಿಸಿದ್ದು, ಅವರ ಕೋಣೆಗೆ ಚಿಲಕ ಹಾಕಲಾಗಿತ್ತು. ತೆರೆದು ಒಳ ಪ್ರವೇಶಿಸಿದರೆ ಪತ್ನಿ ಮನದೀಪ್ ಹಗ್ಗದಿಂದ ಕೈ ಕಟ್ಟಿಹಾಕಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಅವಳನ್ನು ರವೀಂದರ್ ಹಗ್ಗದಿಂದ ಬಿಡಿಸಿದ್ದು, ಪಕ್ಕದ ರೂಂ ಕೂಡ ಲಾಕ್ ಆಗಿತ್ತು. ಬಾಗಿಲು ತೆಗೆದಾಗ ತಂದೆ - ತಾಯಿಯ ಮೃತದೇಹಗಳು ಅರೆಬೆಂದ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡು ರವೀಂದರ್ ಶಾಕ್ ಆಗಿದ್ದಾರೆ. ಅಲ್ಲದೇ ಕೋಣೆಯ ತುಂಬ ಹೊಗೆ ಆವರಿಸಿತ್ತು.
ದುಷ್ಕರ್ಮಿಗಳಿಂದ ಕೃತ್ಯ ಎಂದ ಕೌರ್:
ದುರಂತ ಕಂಡು ಬೆಚ್ಚಿಬಿದ್ದ ರವೀಂದರ್ ಪತ್ನಿಯನ್ನು ಕೇಳಿದಾಗ ಅಮಾಯಕಿಯಂತೆ ಕಥೆ ಹೆಣೆದ ಮನದೀಪ್ ಕೌರ್, ಸಂಜೆ 4 ಗಂಟೆ ಸುಮಾರಿಗೆ ಮೂವರು ಮನೆಗೆ ನುಗ್ಗಿ ತನ್ನನ್ನು ಕೋಣೆಯಲ್ಲಿದ್ದ ಕುರ್ಚಿಗೆ ಕಟ್ಟಿಹಾಕಿ, ಬಾಗಿಲು ಲಾಕ್ ಮಾಡಿದ್ದಾರೆ. ಮನೆಯಲ್ಲಿ ನಡೆದ ಕೃತ್ಯವೆಲ್ಲ ಅವರಿಂದಲೇ ನಡೆದಿದೆ ಎಂದು ರವೀಂದರ್ನನ್ನು ನಂಬಿಸಿದ್ದಾಳೆ.
ಎರಡು ಆಯಾಮದಲ್ಲಿ ತನಿಖೆ:
ಮನದೀಪ್ ಕೌರ್ ರೂಮಿನ ಸ್ನಾನಗೃಹವೂ ಸೇರಿಕೊಂಡಿದ್ದು, ಕೋಣೆಯ ಮತ್ತೊಂದು ಬಾಗಿಲಿಗೆ ಹೊರಗಿನಿಂದ ಲಾಕ್ ಇರಲಿಲ್ಲ. ಇದು ಎಲ್ಲರ ಅನುಮಾನಕ್ಕೆ ಕಾರಣವಾಗಿದ್ದು, ಪತಿ ರವೀಂದರ್ ನೀಡಿದ್ದ ದೂರಿನ ಮೇರೆಗೆ ಕೌರ್ ಹಾಗೂ ದುಷ್ಕರ್ಮಿಗಳ ಮೇಲೆ ಪ್ರಕರಣ ದಾಖಲಾಗಿತ್ತು. ತಜ್ಞರ ತಂಡ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳೂ ಕೂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು.
ಅತ್ತೆ-ಮಾವನ ಕೊಂದು ಬೆಂಕಿಯಿಟ್ಟ ಸೊಸೆ ತನಿಖೆ ಕೈಗೆತ್ತಿಕೊಂಡ ಪೊಲೀಸರು ಕೆಲವೇ ಗಂಟೆಗಳಲ್ಲಿ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೊಸೆ ಕೌರ್ ತನ್ನ ವಿವಾಹೇತರ ಸಂಬಂಧಕ್ಕೋಸ್ಕರ ಅತ್ತೆ-ಮಾವನನ್ನೇ ಮುಗಿಸಿರುವುದನ್ನು ಖಾಕಿ ಬಯಲಿಗೆಳೆದಿದೆ. ಗಂಡ ಮನೆಯಿಂದ ಹೊರಗೆ ಹೋಗುತ್ತಿದ್ದಂತೆ ಪ್ರಿಯಕರನನ್ನು ಮನೆಗೆ ಕರೆಸಿಕೊಂಡ ಕೌರ್, ಅತ್ತೆ-ಮಾವನನ್ನು ಕತ್ತು ಹಿಸುಕಿ ಕೊಲೆ ಮಾಡಿ, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮೃತದೇಹಕ್ಕೆ ಬೆಂಕಿ ಇಟ್ಟಿದ್ದರು.
ಬಳಿಕ ಇಬ್ಬರೂ ಸೇರಿ ಮನೆಯಲ್ಲಿದ್ದ 19 ತೊಲೆ ಚಿನ್ನ ಮತ್ತು 45 ಸಾವಿರ ರೂ. ದೋಚಿದ್ದು, ಪ್ರಿಯಕರ ಜಸ್ಮೀತ್ ಅದನ್ನು ಹೊತ್ತೊಯ್ದಿದ್ದ. ಇದಲ್ಲದೇ ಮನದೀಪ್ ಕೌರ್ ಈ ಹಿಂದೆ ತನ್ನ ಪ್ರಿಯಕರನ ಜೊತೆ ಸೇರಿ ಮನೆಯೊಂದರಲ್ಲಿ 15 ತೊಲಾ ಚಿನ್ನಾಭರಣ ಕದ್ದಿರುವುದು ಕೂಡ ತನಿಖೆ ವೇಳೆ ಬೆಳಕಿಗೆ ಬಂದಿದೆ. ಕೊಲೆಗೆ ಬಳಸಿದ್ದ ಚಾಕು ಮತ್ತು ಬೈಕ್ನ್ನು ವಶಪಡಿಸಿಕೊಂಡ ಪೊಲೀಸರು ಇಬ್ಬರು ಆರೋಪಿಗಳನ್ನೂ ಜೈಲಿಗಟ್ಟಿದ್ದಾರೆ.
ಇದನ್ನೂ ಓದಿ:ಕೋವಿಡ್ ಬಿಕ್ಕಟ್ಟಿನಿಂದ 3 ವರ್ಷ ದೂರ, ದೂರ.. ಪ್ರೇಯಸಿ ಭೇಟಿಗೆ ಸಾಧ್ಯವಾಗದ್ದಕ್ಕೆ ದುರಂತ!