ತಿರುನಲ್ವೇಲಿ (ತಮಿಳುನಾಡು):ಗಂಡ ಹೆಂಡಿರ ಜಗಳ ಉಂಡು ಮಲಗುವ ವರೆಗೆ ಎಂಬ ಮಾತಿದೆ. ಆದರೆ ಅತ್ತೆ ಸೊಸೆ ಜಗಳಕ್ಕೆ ಅಂತ್ಯವೇ ಇಲ್ಲ. ಇದಕ್ಕೆ ಸರಿಯಾದ ಉದಾಹರಣೆ ಎಂಬಂತೆ ತಮಿಳುನಾಡಿನ ತಿರುನಲ್ವೇಲಿಯಲ್ಲಿ ಅತ್ತೆ ಸೊಸೆ ಜಗಳ ತಾರಕಕ್ಕೇರಿದ್ದು, ಸೊಸೆಯೇ ಅತ್ತೆಯನ್ನು ಕೊಂದಿದ್ದಾಳೆ. ಆದರೆ, ಪೊಲೀಸರಿಗೆ ಪ್ರಕರಣ ಭೇದಿಸಲು 24 ಗಂಟೆಯೇ ಬೇಕಾಯಿತು. ಸೊಸೆಯ ಚಾಲಾಕಿತನ ಪೊಲೀಸರಿಗೆ ಪೀಕಲಾಟ ತಂದಿಟ್ಟಿತ್ತು.
ಸೋಮವಾರಪೇಟೆ ಸೀತಾಪಾಲಪನಲ್ಲೂರು ಸಮೀಪದ ವಡುಕನಪಟ್ಟಿ ಗ್ರಾಮದ ಪಂಚಾಯತ್ ಉಪಾಧ್ಯಕ್ಷರಾಗಿದ್ದ ಷಣ್ಮುಗವೇಲ್ ಅವರ ಪತ್ನಿ ಸೀತಾರಾಮಲಕ್ಷ್ಮಿ (58) ಅವರ ಮೇಲೆ ಮೇ 29 ರಂದು ಮಾರಣಾಂತಿಕ ಹಲ್ಲೆ ಮಾಡಲಾಗಿತ್ತು. ಸೀತಾರಾಮಲಕ್ಷ್ಮಿ ಅವರನ್ನೂ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಹಲ್ಲೆ ಆಗಿದ್ದ ಕಾರಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದರು. ಸಾವನ್ನಪ್ಪಿದ ಸೀತಾರಾಮಲಕ್ಷ್ಮಿ ಅವರ ಕೊರಳಲ್ಲಿದ್ದ ಚಿನ್ನದ ಸರ ಕಳ್ಳತನ ಆಗಿತ್ತು. ಇದರಿಂದ ಪ್ರಕರಣ ಕಳ್ಳತನಕ್ಕಾಗಿ ಮಾಡಲಾಗಿದೆ ಎಂದು ಅನುಮಾನಿಸಲಾಗಿತ್ತು.
ಸಿಸಿಟಿವಿ ದೃಶ್ಯ ನೀಡಿತು ಸಾಕ್ಷ್ಯ: ತನಿಖೆ ಆರಂಭಿಸಿದ ಪೊಲೀಸರಿಗೆ ಮನೆಯಲ್ಲಿ ಆಳವಡಿಸಿದ್ದ ಸಿಸಿಟಿವಿಯ ದೃಶ್ಯ ಆಧಾರವಾಗಿತ್ತು. ವಿಡಿಯೋದಲ್ಲಿ ಒಬ್ಬ ಪುರುಷ ಹೆಲ್ಮೆಟ್ ಧರಿಸಿ ಒಳಗೆ ಬಂದಿರುವುದು ಕಂಡು ಬಂದಿತ್ತು. ಸಿಸಿಟಿವಿ ದೃಶ್ಯದಲ್ಲಿ ಕೊಲೆಗಾಗಿ ವಸ್ತುವೊಂದನ್ನು ತೆಗೆದುಕೊಂಡು ಹೋಗುವುದು ಸಹ ಕಾಣಿಸಿದೆ. ಪೊಲೀಸರು ಇದನ್ನೇ ದಾಖಲೆಯಾಗಿಟ್ಟುಕೊಂಡು ಹಂತಕನನ್ನು ಹುಡುಕಲು ಆರಂಭಿಸಿದ್ದರು.
ಸ್ಥಳೀಯರಿಂದ ಪೊಲೀಸರಿಗೆ ಸಿಕ್ಕ ಮಾಹಿತಿ ಸೀತಾರಾಮಲಕ್ಷ್ಮಿ ಪುತ್ರ ರಾಮಸ್ವಾಮಿಗೆ ಮಡದಿ ಮಹಾಲಕ್ಷ್ಮಿ ಜೊತೆ ಯಾವಾಗಲೂ ಗಲಾಟೆ ನಡೆಯುತ್ತಿತ್ತು. ಇಬ್ಬರ ನಡುವಿನ ಜಗಳ ಇತ್ತೀಚೆಗೆ ತಾರಕಕ್ಕೂ ಹೋಗಿತ್ತು. ಹಿರಿಯರು ರಾಜಿ ಸಂಧಾನ ಕೂಡಾ ಮಾಡಿದ್ದರು. ಆದರೆ ಅದೂ ಯಶಸ್ವಿಯಾಗಿರಲಿಲ್ಲ. ಆದರೆ ಕೊನೆಯದಾಗಿ ಪತ್ರನಿಗೆ ಪಕ್ಕದಲ್ಲಿ ಮನೆ ಮಾಡಿಕೊಡಲಾಗಿತ್ತು. ಮಗ ರಾಮಸ್ವಾಮಿ ಮತ್ತು ಮಹಾಲಕ್ಷ್ಮಿ ಇಬ್ಬರು ಮಕ್ಕಳೊಂದಿಗೆ ಅಲ್ಲಿ ವಾಸಿಸುತ್ತಿದ್ದರು.