ಗಿರಿದಿಹ್ (ಜಾರ್ಖಂಡ್): ಸೈಬರ್ ವಂಚನೆ ಪ್ರಕರಣದಲ್ಲಿ ಬಂಧಿಸಿದ್ದ ಆರೋಪಿಯ ವಿಚಾರಣೆ ನಡೆಸಿದಾಗ ಮೊಬೈಲ್‌ನಲ್ಲಿ ಬರೋಬ್ಬರಿ 6 ಲಕ್ಷ ಮಂದಿಯ ಡೇಟಾ ಪತ್ತೆಯಾಗಿರುವ ಘಟನೆ ಜಾರ್ಖಂಡ್ನ ಗಿರಿದಿಹ್ ಎಂಬಲ್ಲಿ ನಡೆದಿದೆ. ಬಂಧಿತ ಆರೋಪಿ ನಿಖಿಲ್ ಮೊಬೈಲ್‌ನಲ್ಲಿ ಸುಮಾರು ಆರು ಲಕ್ಷ ಫೋನ್ ಸಂಖ್ಯೆಗಳು, ಹೆಸರು, ಬ್ಯಾಂಕ್ ಖಾತೆ ಸಂಖ್ಯೆಗಳು ಮತ್ತು ವಿವಿಧ ಜನರ ವಾರ್ಷಿಕ ವೇತನಗಳ ವಿವರ ಪತ್ತೆಯಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ.
ಸೈಬರ್ ವಂಚನೆ ಪ್ರಕರಣದಲ್ಲಿ ಆರೋಪಿ ನಿಖಿಲ್ ಮತ್ತು ಆತನ ಸಹಚರ ಝಾಕಿರ್ ಅನ್ಸಾರಿಯನ್ನು ಬಂಧಿಸಲಾಗಿದ್ದು. ಬಂಧಿತರಿಂದ ನಾಲ್ಕು ಮೊಬೈಲ್, 60 ಸಾವಿರ ನಗದು, ಒಂದು ಎಟಿಎಂ ಕಾರ್ಡ್, ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ವಶಪಡಿಸಿಕೊಳಲಾಗಿದೆ. ಈ ಹಿಂದೆ 2018ರಲ್ಲಿ ಸೈಬರ್ ಕ್ರೈಂ ಪ್ರಕರಣದಲ್ಲಿ ಆರೋಪಿ ನಿಖಿಲ್ ಜೈಲಿಗೆ ಹೋಗಿದ್ದನು.
ಈ ಪ್ರಕರಣ ಬಗ್ಗೆ ಮಾತನಾಡಿದ ಪೊಲೀಸ್ ಅಧಿಕಾರಿ ಅನಿಲ್‌ಕುಮಾರ್, ಈ ಇಬ್ಬರೂ ಆರೋಪಿಗಳು ಖಾಸಗಿ ಬ್ಯಾಂಕ್ನ ಕೆವೈಸಿ ಅಪ್ಡೇಟ್ ಹೆಸರಿನಲ್ಲಿ ಲಿಂಕ್ ಕಳುಹಿಸಿ ಅಮಾಯಕರನ್ನು ವಂಚಿಸುತ್ತಿದ್ದರು ಮತ್ತು ಆನ್ಲೈನ್ನಲ್ಲಿ ಬಲ್ಕ್ ಸಂದೇಶಗಳನ್ನು ಕಳುಹಿಸಿ ಜನರ ಡೇಟಾವನ್ನು ಸಂಗ್ರಹಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿ ನಿಖಿಲ್ ಸೈಬರ್ ಕ್ರಿಮಿನಲ್ಸ್ಗಳೊಂದಿಗೆ ನೇರ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಈ ಹಿಂದೆ 2018ರಲ್ಲಿ ಸೈಬರ್ ಕ್ರೈಂ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ ಎಂಬುದಾಗಿ ತಿಳಿದು ಬಂದಿದೆ.
ಆರೋಪಿ ನಿಖಿಲ್‌ನ ಮೊಬೈಲ್‌ನಲ್ಲಿ ಸುಮಾರು 20 ಲಕ್ಷ ರೂಪಾಯಿಯ ಸೈಬರ್ ವಂಚನೆಯ ಮಾಹಿತಿಯು ಪೊಲೀಸರಿಗೆ ಸಿಕ್ಕಿದ್ದು. ಇದೀಗ ಆರೋಪಿ ಮೊಬೈಲ್‌ನಲ್ಲಿ 6 ಲಕ್ಷ ಜನರ ಸಂಖ್ಯೆಗಳು ಮತ್ತು ವಿವರಗಳು ಪತ್ತೆಯಾಗಿವೆ, ಅದರಲ್ಲಿ ಎಷ್ಟು ಮಂದಿಯನ್ನು ವಂಚಿಸಲಾಗಿದೆ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.