ನವದೆಹಲಿ/ಗಾಜಿಯಾಬಾದ್: ಕೇಂದ್ರ ಸರಕಾರದ ಹರ್ ಘರ್ ತಿರಂಗಾ ಅಭಿಯಾನದ ಕುರಿತು ಟೀಕೆ ಮಾಡುವ ಮೂಲಕ ದಾಸ್ನಾ ದೇವಸ್ಥಾನದ 58 ವರ್ಷದ ಪ್ರಧಾನ ಅರ್ಚಕ ಯತಿ ನರಸಿಂಹಾನಂದ್ ಮತ್ತೆ ವಿವಾದಕ್ಕೆ ಸಿಲುಕಿದ್ದಾರೆ. ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದಾಸ್ನಾ ದೇಗುಲದ ಪ್ರಧಾನ ಅರ್ಚಕರು, ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳದ ಸಲಾವುದ್ದೀನ್ ಎಂಬ ಮುಸ್ಲಿಂನಿಗೆ ತ್ರಿವರ್ಣ ಧ್ವಜ ತಯಾರಿಕೆಯ ಅತಿ ದೊಡ್ಡ ಗುತ್ತಿಗೆ ನೀಡಿದೆ. ಆದ್ದರಿಂದ ನಾನು ಎಲ್ಲಾ ಹಿಂದೂಗಳಿಗೆ ಮನವಿ ಮಾಡುವುದು ಏನೆಂದರೆ ತಿರಂಗ ಖರೀದಿಯನ್ನು ಬಹಿಷ್ಕರಿಸಿ. ಬದಲಿಗೆ ತಮ್ಮ ಮನೆಗಳಲ್ಲಿ ಇರಿಸಲಾಗಿರುವ ಹಳೆಯ ಧ್ವಜವನ್ನು ಬಳಸಬಹುದು ಎಂದು ಹೇಳಿದ್ದಾರೆ.
ದೇಶದ ಆಡಳಿತ ಪಕ್ಷವು ತ್ರಿವರ್ಣ ಧ್ವಜಗಳನ್ನು ತಯಾರಿಸುವ ಅತಿದೊಡ್ಡ ಗುತ್ತಿಗೆಯನ್ನು ಬಂಗಾಳ ಮೂಲದ ಕಂಪನಿಯೊಂದಕ್ಕೆ ನೀಡಿದೆ. ಅದರ ಮಾಲೀಕ ಮುಸ್ಲಿಂ. ಇದು ಹಿಂದೂಗಳ ವಿರುದ್ಧದ ದೊಡ್ಡ ಷಡ್ಯಂತ್ರ. ಆದ್ದರಿಂದ ತಿರಂಗ ಖರೀದಿಯನ್ನು ಬಹಿಷ್ಕರಿಸಿ. ಹಿಂದೂಗಳು ತಮ್ಮ ಮನೆಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲು ಬಯಸಿದರೆ ಹಳೆಯ ತ್ರಿವರ್ಣಗಳನ್ನು ಬಳಸಬಹುದು. ಸಲಾವುದ್ದೀನ್‌ಗೆ ಹಣ ನೀಡಬೇಡಿ ಎಂದು ಯತಿ ನರಸಿಂಹಾನಂದ್ ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆದರೆ, ವೈರಲ್ ಆಗಿರುವ ವಿಡಿಯೋದ ಸತ್ಯಾಸತ್ಯತೆಯನ್ನು ETV Bharat Karnataka ಸ್ಪಷ್ಟಿಕರಿಸುವುದಿಲ್ಲ. ಈ ಸಮಸ್ಯೆ ಆಡಳಿತದ ಗಮನಕ್ಕೆ ಬಂದಿದೆ ಎಂದು ಹೇಳಲಾಗ್ತಿದೆ.
ಓದಿ:ದಾಲ್ ಸರೋವರದಲ್ಲಿ ತಿರಂಗಾ ಶಿಕರ.. ಇದೊಂದು ಅದ್ಭುತವೆಂದು ಬಣ್ಣಿಸಿದ ಪ್ರಧಾನಿ ಮೋದಿ