ಅಮೆರಿಕ ಕಾಂಗ್ರೆಸ್ನ ಜಂಟಿ ಅಧಿವೇಶನದಲ್ಲಿ ಪ್ರಧಾನಿ ಮೋದಿ ಭಾಷಣ ವಾಷಿಂಗ್ಟನ್:ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕ ಕಾಂಗ್ರೆಸ್ನ( ಸಂಸತ್) ಜಂಟಿ ಅಧಿವೇಶನದಲ್ಲಿ, ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ವಿಕಾಸಗೊಳ್ಳುತ್ತಿರುವ ಡೈನಾಮಿಕ್ಸ್ ಬಗ್ಗೆ ತಮ್ಮ ಕಳವಳ ವ್ಯಕ್ತಪಡಿಸಿದರು. "ಬಲವಂತದ ಮತ್ತು ಮುಖಾಮುಖಿಯ ಕಪ್ಪು ಮೋಡಗಳು ತಮ್ಮ ನೆರಳನ್ನು ಬೀರುತ್ತಿವೆ" ಎನ್ನುವ ಮೂಲಕ ಚೀನಾ ಹೆಸರು ಪ್ರಸ್ತಾಪಿಸದೇ ಅಲ್ಲಿನ ಸ್ಥಿರತೆಗೆ ನಾವು ಮಾಡಬೇಕಾದ ಕೆಲಸದ ಬಗ್ಗೆ ಪ್ರತಿಪಾದನೆ ಮಾಡಿದರು. ಅವರ ಈ ಹೇಳಿಕೆಯು ಯಾವುದೇ ದೇಶದ ಹೆಸರನ್ನು ಸ್ಪಷ್ಟವಾಗಿ ಉಲ್ಲೇಖಿಸದೇ ಇದ್ದರೂ, ಚೀನಾದ ಬಗ್ಗೆ ಪರೋಕ್ಷವಾಗಿ ಹೇಳಿದಂತಿತ್ತು.
ಇಂಡೋ - ಪೆಸಿಫಿಕ್‌ನಲ್ಲಿ ಸ್ಥಿರತೆಯ ಮಹತ್ವವನ್ನು ಎತ್ತಿ ಹಿಡಿದ ಪ್ರಧಾನಿ ಮೋದಿ, ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಸಂಬಂಧದಲ್ಲಿ ಇಂಡೋ ಫೆಸಿಪಿಕ್ ರಕ್ಷಣೆ ಬಗ್ಗೆ ಕಾಳಜಿ ಹೊಂದಿರುವುದನ್ನ ವಿಶ್ವಕ್ಕೆ ರವಾನಿಸಿದರು. ಈ ಪ್ರದೇಶವು ಇತರರ ಹಿಡಿತದಿಂದ ಮುಕ್ತವಾಗಬೇಕಾದ ಅಗತ್ಯವಿದೆ ಎಂದರು. ಅಲ್ಲಿ ಎಲ್ಲಾ ರಾಷ್ಟ್ರಗಳು ಭಯ ಅಥವಾ ಬಲವಂತವಿಲ್ಲದೆ ಸ್ವತಂತ್ರ ಆಯ್ಕೆಗಳನ್ನು ಹೊಂದಲು ಅವಕಾಶ ಸಿಗಬೇಕು. ಇಲ್ಲಿನ ರಾಷ್ಟ್ರಗಳ ಜನರನ್ನು ಉಸಿರುಗಟ್ಟಿಸದಂತೆ ಪ್ರಗತಿ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವ ಇಂಡೋ-ಪೆಸಿಫಿಕ್ ಅನ್ನು ಅಭಿವೃದ್ಧಿ ಪಡಿಸಬೇಕಿದೆ ಎಂದು ಪ್ರಧಾನಿ ಮೋದಿ ಅಮೆರಿಕದ ಸಂಸತ್ನಲ್ಲಿ ಪ್ರತಿಪಾದಿಸುವ ಮೂಲಕ ಚೀನಾಕ್ಕೆ ಪರೋಕ್ಷವಾಗಿ ನೇರ ಎಚ್ಚರಿಕೆ ನೀಡಿದರು.
ಇದೇ ವೇಳೆ, ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯ ತತ್ವಗಳನ್ನು ಗೌರವಿಸುವ ಮಹತ್ವದ ಕುರಿತು ಮಾತನಾಡಿದ ಪಿಎ ಮೋದಿ ಇಂಡೋ-ಪೆಸಿಫಿಕ್‌ನಲ್ಲಿ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ಸಾರ್ವಭೌಮತ್ದದ ಹೋರಾಟ ಮಾಡುವ ಕಾಲ ಇದಲ್ಲ ಎಂದು ಪ್ರತಿಪಾದಿಸಿದರು. ಈ ಪ್ರದೇಶವು ವಿಶೇಷವಾಗಿ ದಕ್ಷಿಣ ಚೀನಾ ಸಮುದ್ರ ಇಂತಹ ಚಟುವಟಿಕೆಗಳಿಗೆ ಕಾರಣವಾಗಿದೆ. ಚೀನಾ ಇಂಡೋ ಪೆಸಿಪಿಕ್ ಪ್ರದೇಶದಲ್ಲಿ ಚೀನಾ ತನ್ನ ಸಾರ್ವಭೌಮತ್ವ ಪ್ರಚುರ ಪಡಿಸುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕದ ನೆಲದಲ್ಲಿ ನಿಂತು ಈ ಬಗ್ಗೆ ಮಾತನಾಡುವ ಮೂಲಕ ಮೋದಿ ಶಾಂತಿಯ ಸಂದೇಶದ ಜೊತೆ ಸುಮ್ಮನಿರಲ್ಲ ಎಂಬ ಎಚ್ಚರಿಕೆಯನ್ನು ಪರೋಕ್ಷವಾಗಿ ರವಾನಿಸಿದ್ದಾರೆ.
ಇದನ್ನೂ ಓದಿ:ಅಮೆರಿಕ-ಭಾರತ ದೇಶಗಳದ್ದು 21ನೇ ಶತಮಾನದ ಅತ್ಯಂತ ನಿರ್ಣಾಯಕ ಬಾಂಧವ್ಯ- ಜೋ ಬೈಡನ್
ಪ್ರಧಾನಿಯವರ ಹೇಳಿಕೆಗಳು ಇಂಡೋ-ಪೆಸಿಫಿಕ್‌ನಲ್ಲಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯನ್ನು ಕಾಪಾಡಿಕೊಳ್ಳಲು ಭಾರತದ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ. ಭಾರತವು, ಮುಕ್ತ ಮತ್ತು ಅಂತರ್ಗತ ಇಂಡೋ-ಪೆಸಿಫಿಕ್ ಅನ್ನು ಎತ್ತಿಹಿಡಿಯಲು ಯುನೈಟೆಡ್ ಸ್ಟೇಟ್ಸ್, ಜಪಾನ್ ಮತ್ತು ಆಸ್ಟ್ರೇಲಿಯಾದೊಂದಿಗೆ ಚತುರ್ಭುಜ ಭದ್ರತಾ ಸಂವಾದ ಸೇರಿದಂತೆ ಕಾರ್ಯತಂತ್ರದ ಪಾಲುದಾರಿಕೆ ನೀತಿಯನ್ನು ಅನುಸರಿಸಲು ಅನುಸಂಧಾನ ಮಾಡಿಕೊಂಡಿದೆ.
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಒಂದಾಗಿರುವ ಭಾರತ, ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ. ಇಂಡೋ-ಪೆಸಿಫಿಕ್‌ನ ಭವಿಷ್ಯವನ್ನು ರೂಪಿಸುವಲ್ಲಿ ಭಾರತವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಪ್ರಧಾನಿ ಮೋದಿಯವರು ಅಮೆರಿಕ ಕಾಂಗ್ರೆಸ್( ಸಂಸತ್)ನ ಜಂಟಿ ಸದನ ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಇಂಡೋ ಫೆಸಿಪಿಕ್ನ ಸ್ಥಿರತೆಯನ್ನು ಕಾಪಾಡಲು, ನಿಯಮಾಧಾರಿತ ಆದೇಶಗಳನ್ನು ಪಾಲಿಸಲು ಎಲ್ಲ ರಾಷ್ಟ್ರಗಳಿಗೂ ಹಕ್ಕಿದೆ. ಹಾಗೂ ಆಯಾಯ ರಾಷ್ಟ್ರಗಳ ಸ್ವಾತಂತ್ರ್ಯ ಮತ್ತು ಸುರಕ್ಷತೆಯನ್ನು ಖಾತ್ರಿಪಡಿಸಲು ಭಾರತ ಬದ್ಧವಾಗಿದೆ ಎಂದು ಮೋದಿ ಹೇಳಿದ್ದಾರೆ.
ಪ್ರಧಾನ ಮಂತ್ರಿ ಮೋದಿಯವರ ಅಮೆರಿಕ ಭೇಟಿಯು ಅಮೆರಿಕ ಮತ್ತು ಭಾರತದ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ರಕ್ಷಣೆ, ಬಾಹ್ಯಾಕಾಶ, ಶುದ್ಧ ಶಕ್ತಿ ಮತ್ತು ತಂತ್ರಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಭಾರತ ಹಾಗೂ ಅಮೆರಿಕ ಸಂಬಂಧಗಳನ್ನು ವೃದ್ಧಿಸುವ ಉದ್ದೇಶದಿಂದ ಸಹಕಾರಿಯಾಗಿದೆ. ಜಾಗತಿಕ ಒಳಿತಿಗಾಗಿ ಮತ್ತು ಶಾಂತಿ, ಸ್ಥಿರತೆ ಹಾಗೂ ಸಮೃದ್ಧಿಗಾಗಿ ಒಟ್ಟಾಗಿ ಕೆಲಸ ಮಾಡಲು ಭಾರತ ಹಾಗೂ ಅಮೆರಿಕ ಬದ್ಧವಾಗಿದೆ ಎಂದು ಇದೇ ವೇಳೆ ಬೈಡನ್ ಹಾಗೂ ಮೋದಿ ಘೋಷಿಸಿದ್ದಾರೆ.
ಇದನ್ನೂ ಓದಿ:ಆಫ್ರಿಕಾವನ್ನು ಶಾಶ್ವತ ಜಿ 20 ಸದಸ್ಯರನ್ನಾಗಿ ಸೇರಿಸುವ ಪ್ರಸ್ತಾಪಕ್ಕೆ ಒಪ್ಪಿಗೆ: ಬೈಡನ್ಗೆ ಮೋದಿ ಧನ್ಯವಾದ
'ಇದು ಯುದ್ಧದ ಯುಗವಲ್ಲ'..ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕ ಕಾಂಗ್ರೆಸ್ನ( ಸಂಸತ್) ಜಂಟಿ ಅಧಿವೇಶನದಲ್ಲಿ ಉಕ್ರೇನ್ ಬಗ್ಗೆ ಮಾತನಾಡುತ್ತಾ, 'ಇದು ಯುದ್ಧದ ಯುಗವಲ್ಲ' ಎಂದು ಪುನರುಚ್ಛರಿಸಿದ್ದಾರೆ. "ನಾನು ನೇರವಾಗಿ ಮತ್ತು ಸಾರ್ವಜನಿಕವಾಗಿ ಹೇಳಿದಂತೆ, ಇದು ಯುದ್ಧದ ಯುಗವಲ್ಲ. ರಾಜತಾಂತ್ರಿಕ ಮಾತುಕತೆಯಿಂದ ಶಾಂತಿ ಸಂಧಾನ ಮಾಡಿಕೊಳ್ಳಬೇಕು. ರಕ್ತಪಾತ ಮತ್ತು ಜೀವಹಾನಿಯನ್ನು ತಡೆಯಲು ಏನು ಮಾಡಬಹುದೋ, ಅದನ್ನು ಮಾಡಬೇಕು" ಎಂದು ಹೇಳಿದ್ದಾರೆ. 2022ರಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಾತನಾಡುವಾಗ ಪ್ರಧಾನಿ ಈ ಇದೇ ಮಾತನ್ನು ಬಳಸಿದ್ದರು.