ಮುಂಬೈ (ಮಹಾರಾಷ್ಟ್ರ): ಟೈಗರ್ 3 ಚಿತ್ರದ ವೀಕ್ಷಣೆ ವೇಳೆ ಥಿಯೇಟರ್ಗಳಲ್ಲಿಯೇ ಪಟಾಕಿ ಸಿಡಿಸಿ ಅತಿರೇಕದ ಅಭಿಮಾನ ತೋರಿರುವ ಬಗ್ಗೆ ನಟ ಸಲ್ಮಾನ್ ಖಾನ್ ವಿಷಾದ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಯಾರೂ ಸಹ ಜೀವಕ್ಕೆ ಅಪಾಯವನ್ನುಂಟು ಮಾಡುವ ಇಂತಹ ಅಭಿಮಾನಕ್ಕೆ ಮುಂದಾಗಬಾರದು ಎಂದು ಅವರು ಅಭಿಮಾನಿಗಳಿಗೆ ಕಿವಿ ಮಾತು ಹೇಳಿದ್ದಾರೆ. ಇನ್‌ಸ್ಟಾಗ್ರಾಮ್ ವಿಷಾದ ವ್ಯಕ್ತಪಡಿಸಿರುವ ಸಲ್ಮಾನ್ ಖಾನ್, "ಥಿಯೇಟರ್‌ಗಳಲ್ಲಿ ಪಟಾಕಿ ಸಿಡಿಸಿದ ಬಗ್ಗೆ ನಾನೂ ಸಹ ಕೇಳಿದೆ. ಈ ಘಟನೆ ತುಂಬಾ ಅಪಾಯಕಾರಿ. ನಮ್ಮನ್ನು ಮತ್ತು ಇತರರನ್ನು ಅಪಾಯಕ್ಕೆ ಸಿಲುಕಿಸುವ ಇಂತಹ ಕಾರ್ಯಕ್ಕೆ ಯಾರೂ ಮುಂದಾಗಬಾರದು. ಚಿತ್ರವನ್ನು ನೋಡಿ ಆನಂದಿಸೋಣ. ಸುರಕ್ಷಿತವಾಗಿರಿ" ಎಂದು ಬರೆದಿದ್ದಾರೆ.
ಥಿಯೇಟರ್ನಲ್ಲಿ ಪಟಾಕಿ ಸಿಡಿಸಿ ಅವಾಂತರಕ್ಕೆ ಕಾರಣರಾದ ಕಿಡಿಗೇಡಿಗಳ ಕೃತ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಖ್ಯಾತ ಚಿತ್ರ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಸೇರಿದಂತೆ ಅನೇಕ ನೆಟಿಜನ್ಗಳು ಈ ಘಟನೆಯನ್ನು ಖಂಡಿಸಿದ್ದಾರೆ. ಇದು ಮಿತಿ ಮೀರಿದ ಹುಚ್ಚುತನ, ಥಿಯೇಟರ್ನಲ್ಲಿ ಪಟಾಕಿ ಹಚ್ಚಲು ಅನುಮತಿ ನೀಡಿದವರು ಯಾರು ಎಂದು ಪ್ರಶ್ನೆ ಮಾಡಿದ್ದಾರೆ.
ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಅಭಿನಯದ ಬಹು ನಿರೀಕ್ಷಿತ 'ಟೈಗರ್ 3' ಚಿತ್ರ ಭಾನುವಾರವಷ್ಟೇ ತೆರೆ ಕಂಡಿತು. ದೀಪಾವಳಿ ಹಬ್ಬದ ನಿಮಿತ್ತ ಹಾಗೂ ಬಹಳ ದಿನಗಳ ಬಳಿಕ ನೆಚ್ಚಿನ ನಟನ ಚಿತ್ರ ಬಿಡುಗಡೆ ಆಗಿದ್ದಕ್ಕೆ ಅಭಿಮಾನಿಗಳಲ್ಲಿ ಖುಷಿ ಇಮ್ಮಡಿಯಾಗಿದೆ. ಆದರೆ, ನಾಸಿಕ್ ಜಿಲ್ಲೆಯ ಮಾಲೆಗಾಂವ್‌ನಲ್ಲಿರುವ ಮೋಹನ್ ಚಿತ್ರಮಂದಿರದಲ್ಲಿ ಕೆಲವರು ಪಟಾಕಿ ಸಿಡಿಸಿ ಅವಾಂತರ ಸೃಷ್ಟಿಸಿದರು. ಸಲ್ಮಾನ್ ಖಾನ್ ಪರದೆ ಮೇಲೆ ಎಂಟ್ರಿ ಆಗುತ್ತಿದ್ದಂತೆ ರಂಗು ರಂಗಿನ ಪಟಾಕಿ ಸಿಡಿಸಿ ಹುಚ್ಚು ಅಭಿಮಾನ ಮೆರೆದರು. ಸುಮಾರು 10 ನಿಮಿಷಗಳ ಕಾಲ ಚಿತ್ತಾಕರ್ಷಕ ಪಟಾಕಿಗಳು, ರಾಕೆಟ್‌ಗಳು ಎಲ್ಲರನ್ನು ಭಯಕ್ಕೆ ತಳ್ಳಿತು. ಸಿನಿಮಾ ನೋಡುತ್ತಿದ್ದವರ ಮೇಲೆ ಇದ್ದಕ್ಕಿದ್ದಂತೆ ಪಟಾಕಿ ಕಿಡಿಗಳು ಬಿದ್ದಿದ್ದರಿಂದ ಜೀವಭಯದಲ್ಲಿ ಚಿತ್ರಮಂದಿರದಲ್ಲಿಯೇ ಓಡಾಡಲು ಶುರು ಮಾಡಿದರು. ಈ ವೇಳೆ, ಕಾಲ್ತುಳಿತದ ಸನ್ನಿವೇಶ ಕೂಡ ನಡೆಯಿತು. ಈ ಭೀಕರತೆಯನ್ನು ಹಲವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಸದ್ಯ ವೈರಲ್ ಆಗುತ್ತಿದೆ.