ಮಹೋಬಾ: ಉತ್ತರ ಪ್ರದೇಶದಲ್ಲಿ ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ಗೆದ್ದ ದಲಿತ ಮಹಿಳೆ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು. ಆದರೆ ಈಕೆ ದಲಿತ ಮಹಿಳೆ ಎಂಬ ಕಾರಣಕ್ಕೆ ಜಿಲ್ಲೆಯಲ್ಲಿ ನಡೆದ ಅಧಿಕಾರಿಗಳೊಂದಿಗಿನ ಮೊದಲ ಸಭೆಯಲ್ಲಿ ಆಕೆಯನ್ನು ನಿಂದಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಕೊಟ್ವಾಲಿ ಪೊಲೀಸ್ ವಲಯದ ನಾಥುಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇತ್ತೀಚೆಗೆ ಪಂಚಾಯತ್ ಚುನಾವಣೆಯಲ್ಲಿ ಗೆದ್ದ 25 ವರ್ಷದ ಸವಿತಾ ದೇವಿ ಅಹಿರ್ವಾರ್, ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಆಕೆ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿದ್ದು, ಅಲ್ಲಿ ಆಕೆಯನ್ನು ನಿಂದಿಸಿದ್ದಲ್ಲದೆ ಬಲವಂತವಾಗಿ ನೆಲದ ಮೇಲೆ ಕುಳಿತುಕೊಳ್ಳುವಂತೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ವರದಿಗಳ ಪ್ರಕಾರ, ಆಕೆ ಬುಧವಾರದಂದು ಪಂಚಾಯತ್ ಭವನದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದಾರೆ. ಈ ಸಭೆಯನ್ನು ಸಹಾಯಕ ಅಭಿವೃದ್ಧಿ ಅಧಿಕಾರಿ (ಎಡಿಒ) ಮತ್ತು ಬ್ಲಾಕ್ ಡೆವಲಪ್ಮೆಂಟ್ ಆಫೀಸರ್ (ಬಿಡಿಒ) ಅವರ ಸಮ್ಮುಖದಲ್ಲಿ ನಡೆಸಲಾಗುತ್ತಿತ್ತು. ಆದರೆ ಈ ವೇಳೆ ರಾಮು ರಜ್‌ಪೂತ್ ಎಂಬ ವ್ಯಕ್ತಿ ಸೇರಿದಂತೆ ಕೆಲವು ಪ್ರಭಾವಿ ವ್ಯಕ್ತಿಗಳು ಅಲ್ಲಿಗೆ ಆಗಮಿಸಿ ಆಕೆಯನ್ನು ನಿಂದಿಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಮಾತನಾಡಿದ ಸವಿತಾ, “ರಾಮು, ರೂಪೇಂದ್ರ, ಅರ್ಜುನ್, ರವೀಂದ್ರ ಮತ್ತು ಆರು ಅಪರಿಚಿತ ವ್ಯಕ್ತಿಗಳು ಸಭೆ ನಡೆಯುತ್ತಿದ್ದ ಸ್ಥಳಕ್ಕೆ ಪ್ರವೇಶಿಸಿದ್ದಾರೆ. ಈ ವೇಳೆ ರಾಮು ನನಗೆ ಬೆದರಿಕೆ ಹಾಕಿದ್ದಾನೆ. ಕೆಳಜಾತಿಯವಳು ಎಂದು ನಿಂದಿಸಲು ಶುರು ಮಾಡಿದ್ದಾನೆ. ನಾನು ಆತನ ಹೇಳಿಕೆಯನ್ನು ತಿರಸ್ಕರಿಸಿದಾಗ ನನ್ನ ಕೈಯನ್ನು ಹಿಡಿದು ನೆಲದಲ್ಲಿ ಕುಳಿತುಕೊಳ್ಳುವಂತೆ ಒತ್ತಾಯಿಸಿದ್ದಾನೆ” ಎಂದು ಹೇಳಿದ್ದಾರೆ.
ಈ ಸಂಬಂಧ ಹೆಚ್ಚುವರಿ ಎಸ್‌ಪಿ ಆರ್.ಕೆ. ಗೌತಮ್ ಮಾತನಾಡಿ, "ಆರೋಪಿ ರಾಮು ರಜ್‌ಪೂತ್ ಮತ್ತು ಅವನ ಸಹಚರರ ಮೇಲೆ ಗಲಭೆ, ಮಹಿಳೆಯ ಮೇಲೆ ಹಲ್ಲೆ, ಅನುಚಿತ ವರ್ತನೆ ಪ್ರಕರಣ ದಾಖಲಿಸಲಾಗಿದೆ. ಎಸ್‌ಸಿ, ಎಸ್‌ಟಿ ಕಾಯ್ದೆಯಡಿ ರಾಮು ಅವರನ್ನು ಬಂಧಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ" ಎಂದು ಹೇಳಿದರು.