ಬೆಹ್ರೋರ್(ರಾಜಸ್ಥಾನ):ಇತ್ತೀಚೆಗೆ ತೆರೆ ಕಂಡು ಯಶಸ್ವಿಯಾಗಿ ಪ್ರದರ್ಶನ ಕಾಣುವ ಜೊತೆಗೆ ಎಲ್ಲೆಡೆಯಿಂದ ಮೆಚ್ಚುಗೆಗೆ ಪಾತ್ರವಾಗಿರುವ ದಿ ಕಾಶ್ಮೀರಿ ಫೈಲ್ಸ್ ಚಿತ್ರದ ಬಗ್ಗೆ ದಲಿತನೋರ್ವ ವಿವಾದಿತ ಪೋಸ್ಟ್ ಮಾಡಿದ್ದಕ್ಕಾಗಿ ಆತನಿಗೆ ಗ್ರಾಮಸ್ಥರು ಅಮಾನವೀಯ ರೀತಿಯ ಶಿಕ್ಷೆ ನೀಡಿದ್ದಾರೆ. ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಬೆಹ್ರೋರ್ನ ಗೋಕುಲ್ಪುರ ಗ್ರಾಮದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.
ದಿ ಕಾಶ್ಮೀರಿ ಫೈಲ್ಸ್ ಚಿತ್ರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ವಿವಾದಿತ ಪೋಸ್ಟ್ ಮಾಡಿದ್ದಾನೆ. ಇದರ ಬೆನ್ನಲ್ಲೇ ಆತನನ್ನು ಹಿಡಿದು ಕರೆದು ತಂದು ದೇವಸ್ಥಾನದ ಎದುರುಗಡೆ ಗ್ರಾಮಸ್ಥರೆಲ್ಲರೂ ಸೇರಿ ಮೂಗು ಉಜ್ಜಿಸಿದ್ದಾರೆ. ರಾಜಸ್ಥಾನದ ಖಾಸಗಿ ಬ್ಯಾಂಕ್ವೊಂದರಲ್ಲಿ ಸೀನಿಯರ್ ಸೇಲ್ಸ್ ಮ್ಯಾನೇಜರ್ ಆಗಿ ರಾಜೇಶ್ ಮೇಘವಾಲ್ ದಿ ಕಾಶ್ಮೀರಿ ಫೈಲ್ಸ್ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಈ ಚಿತ್ರದಲ್ಲಿ ಕಾಶ್ಮೀರಿ ಪಂಡಿತರಿಗೆ ಅನ್ಯಾಯ ಮತ್ತು ಚಿತ್ರಹಿಂಸೆ ಆಗಿದೆ ಎಂದು ಹೇಳಲಾಗುತ್ತಿದೆ. ಆದರೆ, ದೇಶದಲ್ಲಿ ದಲಿತ ಸಮುದಾಯವೂ ತಾರತಮ್ಯ ಎದುರಿಸುತ್ತಿದೆ. ಮೋದಿ ಸರ್ಕಾರ ಜೈಭೀಮ್, ಶೂದ್ರ ದಿ ರೈಸಿಂಗ್ ಚಿತ್ರಗಳಿಗೆ ಏಕೆ ತೆರಿಗೆ ವಿನಾಯ್ತಿ ನೀಡಲಿಲ್ಲ ಎಂದು ಪ್ರಶ್ನಿಸಿದ್ದರು.