ಗುನಾ :ಮಧ್ಯಪ್ರದೇಶದ ಗುನಾ ಜಿಲ್ಲೆಯ ಸ್ಮಶಾನ ಮೈದಾನವೊಂದರಲ್ಲಿ ಸಂಬಂಧಿಕರ ಅಂತ್ಯಕ್ರಿಯೆ ನೆರವೇರಿಸಲು ದಲಿತ ಕುಟುಂಬವೊಂದನ್ನು ಕೆಲವರು ತಡೆದಿದ್ದರು. ಈ ಹಿನ್ನೆಲೆ ಪೊಲೀಸರು ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಅವಕಾಶ ಕೊಡದ ಕಾರಣ ಆ ಕುಟುಂಬ ಸ್ಮಶಾನದ ಸಮೀಪದ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಿದೆ. ಗುನಾ ಜಿಲ್ಲಾ ಕೇಂದ್ರದಿಂದ 62 ಕಿ.ಮೀ. ದೂರದಲ್ಲಿರುವ ಕುಂಭರಾಜ್ ಪೊಲೀಸ್ ಠಾಣೆ ವ್ಯಾಪ್ತಿಯ ಚಂದ್‌ಪುರ ಗ್ರಾಮದಲ್ಲಿ ಶುಕ್ರವಾರ ಈ ಘಟನೆ ನಡೆದಿದ್ದು, ಇದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ವಿಡಿಯೋದಲ್ಲಿ ಅಂತ್ಯಕ್ರಿಯೆಗಾಗಿ ಸ್ಮಶಾನದ ವೇದಿಕೆಯನ್ನು ದಲಿತ ಕುಟುಂಬ ಬಳಸಲು ಅನುಮತಿಯಿಲ್ಲ ಎಂದು ವ್ಯಕ್ತಿಯೊಬ್ಬರು ಹೇಳುವುದನ್ನು ಕೇಳಬಹುದು. ಸ್ಥಳೀಯ ನಿವಾಸಿ ಕನ್ಹಯ್ಯ ಅಹಿರ್ವಾರ್ (70) ಎಂಬುವರ ಸಾವಿನ ನಂತರ ಅವರ ಕುಟುಂಬ ಸದಸ್ಯರು ಶವವನ್ನು ಸ್ಮಶಾನಕ್ಕೆ ಕೊಂಡೊಯ್ದಿದ್ದಾರೆ.