ಝಲಾವರ್ (ರಾಜಸ್ಥಾನ): ದಲಿತ ಕುಟುಂಬಗಳ ಮೇಲೆ ದೌರ್ಜನ್ಯ ಎಸಗಿರುವ ಪ್ರಕರಣ ಝಲಾವರ್ ಜಿಲ್ಲೆಯ ಜಾವರ್ ಪೊಲೀಸ್ ಠಾಣೆ ವ್ಯಾಪ್ತಿಯ ಜಟವಾ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಗ್ರಾಮದ ಬಹುಸಂಖ್ಯಾತ ಸಮುದಾಯದಿಂದ ಕಿರುಕುಳ ನೀಡಲಾಗುತ್ತಿದೆ. ಗ್ರಾಮದಿಂದ ಹೊರಹಾಕುವುದಾಗಿಯೂ ಬೆದರಿಕೆ ಹಾಕಲಾಗುತ್ತಿದೆ ಎಂದು ದಲಿತ ಕುಟುಂಬ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿದೆ.
ಪೊಲೀಸ್ ಠಾಣಾಧಿಕಾರಿ ವಿಜೇಂದರ್ ಸಿಂಗ್ ಮಾತನಾಡಿ, ಜಟವಾ ಗ್ರಾಮದ ಲೋಧಾ ಸಮುದಾಯದ ಜನರು ಬೈರ್ವ ಸಮುದಾಯದವರನ್ನು ಮಾನಸಿಕವಾಗಿ ಹಿಂಸಿಸುತ್ತಿದ್ದಾರೆ ಎಂಬ ಆರೋಪವಿದೆ. ಅವರ ವಿರುದ್ಧ ದೂರು ದಾಖಲಿಸಲಾಗಿದೆ. ದೇವಸ್ಥಾನದಲ್ಲಿ ಪೂಜೆ ಮಾಡುವ ವಿಚಾರದಲ್ಲಿ ಎರಡು ಸಮುದಾಯಗಳ ನಡುವೆ ಸಂಘರ್ಷ ಉಂಟಾಗಿದೆ. ಬೈರ್ವ ಕುಟುಂಬಗಳಿಗೆ ಗ್ರಾಮದಲ್ಲಿ ಮೂಲಭೂತ ಸೌಕರ್ಯ ನೀಡುವುದನ್ನು ನಿಷೇಧಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಿದ್ದಾರೆ.