ನವದೆಹಲಿ:ವಿಶ್ವಾದ್ಯಂತ ಬೌದ್ಧ ಧರ್ಮೀಯರಿಂದ ವಿಶೇಷವಾಗಿ ಆರಾಧಿಸಲ್ಪಡುವ ದಲೈಲಾಮಾ ಅವರು ಬಾಲಕನ ತುಟಿಗೆ ಮುತ್ತು ಕೊಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವಿಡಿಯೋಗೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಮಕ್ಕಳ ಕೆನ್ನೆಗಳ ಮೇಲೆ ಮುತ್ತು ಕೊಡುವುದು ಆಕ್ಷೇಪಾರ್ಹವಲ್ಲ. ಆದರೆ ಭಾರತೀಯರು ಸಂಪ್ರದಾಯವಾದಿಗಳು. ಸಾರ್ವಜನಿಕವಾಗಿ ಚುಂಬಿಸುವುದನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಇದು ಸಾಮಾನ್ಯವೇ ಆಗಿರಬಹುದು. ಆದರೆ ಅಲ್ಲಿಯೂ ಸಹ ಇದು ಹಿರಿಯರಿಗೆ ಸೀಮಿತವಾಗಿದೆ. ಕಿರಿಯರಿಗೆ ಅಲ್ಲ ಎಂದು ನೆಟ್ಟಿಗರು ಹೌಹಾರಿದ್ದಾರೆ. ವಿಡಿಯೋದಲ್ಲಿ ದಲೈಲಾಮ ಅವರು ಬಾಲಕನ ತುಟಿಗೆ ಮುತ್ತು ಕೊಟ್ಟಿರುವುದು ಮಾತ್ರವಲ್ಲದೇ, ತನ್ನ ನಾಲಿಗೆಯನ್ನು ಹೀರುವಂತೆಯೂ ಕೇಳಿರುವುದನ್ನು ಕಾಣಬಹುದು.
ಟ್ವಿಟರ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಜೂಸ್ಟ್ ಬ್ರೋಕರ್ಸ್ ಎಂಬವರು, "ದಲೈ ಲಾಮಾ ಬೌದ್ಧ ಸಮಾರಂಭದಲ್ಲಿ ಭಾರತೀಯ ಹುಡುಗನನ್ನು ಚುಂಬಿಸುತ್ತಿದ್ದಾರೆ. ಅವನ ನಾಲಿಗೆಯನ್ನು ಸ್ಪರ್ಶಿಸಲು ಪ್ರಯತ್ನಿಸುತ್ತಿದ್ದಾರೆ. "ನನ್ನ ನಾಲಿಗೆಯನ್ನು ಹೀರು" ಎಂದು ಹೇಳುತ್ತಾರೆ. ಹೀಗೆ ಮಾಡಿರುವುದೇಕೆ" ಎಂದು ಪ್ರಶ್ನಿಸಿದ್ದಾರೆ.
ಕೆಟ್ಟ ನಡವಳಿಕೆ- ನೆಟ್ಟಿಗರು: "ಇದು ಅಸಹ್ಯಕರ ನಡವಳಿಕೆ. ದಲೈಲಾಮಾ ಅವರ ವರ್ತನೆಯನ್ನು ಯಾರೂ ಕೂಡಾ ಸಮರ್ಥಿಸಬಾರದು" ಎಂದು ಸಾಮಾಜಿಕ ಜಾಲತಾಣ ಬಳಕೆದಾರರಾದ ದೀಪಿಕಾ ಪುಷ್ಕರ್ ನಾಥ್ ಟ್ವೀಟ್ ಮಾಡಿದ್ದಾರೆ.