ಅನಂತಪುರ (ಆಂಧ್ರಪ್ರದೇಶ): ವಿವಾಹಿತ ಮಹಿಳೆಯೊಬ್ಬರು ದಿನಗೂಲಿ ಕೆಲಸ ಮಾಡುತ್ತಲೇ ಪಿಎಚ್‌ಡಿ ಪೂರ್ಣಗೊಳಿಸಿದ್ದಾರೆ. ಈ ಮೂಲಕ ಬಡತನ, ಮದುವೆ, ಮಕ್ಕಳು, ಕೌಟುಂಬಿಕ ಜವಾಬ್ದಾರಿಗಳು ಓದಲು ಅಡ್ಡಿಯಾಗುವುದಿಲ್ಲ ಎಂಬುದನ್ನು ಈ ಸಾಧಕಿ ನಿರೂಪಿಸಿದ್ದಾರೆ. ಪಿಎಚ್‌ಡಿ ಪದವಿ ಮುಗಿಸಿರುವ ಈಕೆ ಪ್ರೊಫೆಸರ್ ಆಗಬೇಕೆಂಬ ಮಹಾದಾಸೆಯನ್ನೂ ಹೊಂದಿದ್ದಾರೆ.
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಸಾಕೆ ಭಾರತಿ ಎಂಬುವವರೇ ಈ ವಿಶಿಷ್ಟ ಸಾಧಕಿ. ಇವರದ್ದು ತೀರಾ ಬಡ ಕುಟುಂಬ. ದಿನವೂ ದುಡಿಯಲು ಹೋಗದಿದ್ದರೆ ಜೀವನ ನಿರ್ವಹಣೆಯೇ ಕಷ್ಟ ಸಾಧ್ಯ. ದಿನಗೂಲಿ ಕೆಲಸವೇ ಅನಿವಾರ್ಯ. ಮತ್ತೊಂದೆಡೆ, ಕುಟುಂಬದ ಜವಾಬ್ದಾರಿಗಳು. ಇದರ ಜೊತೆಗೆ ಓದುವ ಆಸೆ. ಈ ನಡುವೆ ಮದುವೆಯಾಗಿ ಕೈಯಲ್ಲಿ ಮಗು... ಆದರೆ, ಇದ್ಯಾವುದೂ ದೊಡ್ಡದಲ್ಲ ಎಂದು ಭಾವಿಸಿದ್ದ ಭಾರತಿ ತನ್ನ ಕನಸನ್ನು ನನಸಾಗಿಸುವ ಚಿತ್ತ ಮಾತ್ರ ಬದಲಿಸಲಿಲ್ಲ.
ಅನೇಕ ಅಡೆತಡೆಗಳ ನಡುವೆಯೂ ಭಾರತಿ ತನ್ನ ಓದಿಗೆ ನೀರೆಯುವ ಪ್ರಯತ್ನಕ್ಕೆ ಹಗಲಿರುಳು ಶ್ರಮಿಸಿದರು. ಇದು ಈಗ ಫಲಕೊಟ್ಟಿದೆ. ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಿಂದ 'ಬೈನರಿ ಲಿಕ್ವಿಡ್ ಮಿಕ್ಚರ್ಸ್' ಎಂಬ ಸಂಶೋಧನಾ ಮಹಾಪ್ರಬಂಧ ಮಂಡಿಸಿ ರಸಾಯನಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದಿದ್ದಾರೆ. ಇತ್ತೀಚೆಗೆ ವಿಶ್ವವಿದ್ಯಾಲಯದಲ್ಲಿ ನಡೆದ 11ನೇ ಘಟಿಕೋತ್ಸವ ಸಮಾರಂಭದಲ್ಲಿ ಡಾಕ್ಟರೇಟ್ ಪದವಿ ಸ್ವೀಕರಿಸುವ ಮೂಲಕ ಎಲ್ಲರಿಂದ ಮೆಚ್ಚುಗೆಯನ್ನೂ ಗಳಿಸಿದ್ದಾರೆ.
ಬಾಲ್ಯದಲ್ಲಿ ಓದಿನೊಂದಿಗೆ ಕೂಲಿ ಕೆಲಸ:ಅನಂತಪುರ ಜಿಲ್ಲೆಯ ಸಿಂಗನಮಲ ಮಂಡಲದ ನಾಗುಲಗುಡ್ಡೆಂ ಗ್ರಾಮದ ಕಡು ಬಡ ಕುಟುಂಬಕ್ಕೆ ಸಾಕೆ ಭಾರತಿ ಸೇರಿದವರು. ಇವರ ತಂದೆ-ತಾಯಿಗೆ ಮೂವರು ಮಕ್ಕಳಿದ್ದು, ಅವರಲ್ಲಿ ಭಾರತಿಯೇ ಹಿರಿಯರು. ಚಿಕ್ಕಂದಿನಿಂದಲೂ ಅಮ್ಮನ ಜೊತೆ ಕೆಲಸಕ್ಕೆ ಹೋಗುವ ಮೂಲಕ ಕುಟುಂಬದ ಹೊರೆಯನ್ನು ಹಂಚಿಕೊಂಡರು. ಕೂಲಿ ಕೆಲಸಕ್ಕೆ ಹೋಗುತ್ತಲೇ ಸರ್ಕಾರಿ ಶಾಲೆಗೆ ಹೋಗಿ ಓದುತ್ತಿದ್ದರು.
ಹತ್ತನೇ ತರಗತಿಯಲ್ಲಿ ಭಾರತಿ ಅತ್ಯಧಿಕ ಅಂಕ ಗಳಿಸಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದರು. ನಂತರ ಸಹೋದರ ಮಾವ ಶಿವಪ್ರಸಾದ್ ಜೊತೆ ಭಾರತಿಗೆ ವಿವಾಹ ಮಾಡಿಕೊಡಲಾಯಿತು. ಆದರೆ, ಭಾರತಿಗೆ ಓದಿನ ಬಗ್ಗೆ ತುಂಬಾ ಆಸಕ್ತಿ ಹಾಗೂ ಆಸೆ ಇತ್ತು. ಉನ್ನತ ವ್ಯಾಸಂಗ ಮಾಡಿ ನೆಲೆ ನಿಲ್ಲಬೇಕೆಂಬ ಹಂಬಲವನ್ನು ಚಿಕ್ಕ ವಯಸ್ಸಿನಿಂದಲೂ ಹೊಂದಿದ್ದರು.
ಮತ್ತೊಂದೆಡೆ, ಭಾರತಿಯ ಅತ್ತೆ - ಮಾವನ ಕುಟುಂಬವೂ ದಿನಗೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದೆ. ತವರು ಮನೆಯಿಂದ ಇಲ್ಲಿ ಕೂಡ ಕೂಲಿ ಕೆಲಸಕ್ಕೆ ಹೋಗದಿದ್ದರೆ ಜೀವನ ನಿರ್ವಹಣೆ ಮಾಡುವುದೇ ಕಷ್ಟ ಎಂಬ ಸ್ಥಿತಿ. ಇದರಿಂದ ಭಾರತಿಗೆ ತನ್ನ ಪತಿ ಅಥವಾ ಪತಿಯ ಮನೆಯವರಿಗೆ ತನ್ನ ಅಧ್ಯಯನವನ್ನು ಮುಂದುವರಿಸುವ ಬಗ್ಗೆ ಹೇಳಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ, ಭಾರತಿ ಎಂದಿಗೂ ಪುಸ್ತಕಗಳನ್ನು ಓದುವುದನ್ನು ಬಿಡಲಿಲ್ಲ. ಪತ್ನಿಯ ಆಸಕ್ತಿಯನ್ನು ಗಮನಿಸಿದ ಪತಿ ಶಿವಪ್ರಸಾದ್ ಕೂಲಿ ಹಣದಲ್ಲಿ ಓದಿಸುವ ಅಭಯ ನೀಡಿದರು. ಆ ಭರವಸೆಯಿಂದ ಭಾರತಿಗೆ ಬೆಟ್ಟದಷ್ಟು ಧೈರ್ಯ ಬಂತು.