ನವದೆಹಲಿ: ಕರ್ನಾಟಕದ ಸಾಹಿತಿ ಎಂ.ಎಂ.ಕಲಬುರ್ಗಿ, ಲೇಖಕಿ ಗೌರಿ ಲಂಕೇಶ್ ಹಾಗೂ ಮಹಾರಾಷ್ಟ್ರದ ವಿಚಾರವಾದಿಗಳಾದ ಗೋವಿಂದ್ ಪನ್ಸಾರೆ, ನರೇಂದ್ರ ದಾಭೋಲ್ಕರ್ ಹತ್ಯೆಗಳ ನಡುವೆ ಪರಸ್ಪರ ಸಾಮಾನ್ಯ ಸಂಬಂಧವಿದೆಯೇ ಎಂಬುದರ ಕುರಿತು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಇಂದು (ಶುಕ್ರವಾರ) ಕೇಂದ್ರೀಯ ತನಿಖಾ ಸಂಸ್ಥೆಗೆ (ಸಿಬಿಐ) ಸೂಚಿಸಿತು.
ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣದ ತನಿಖೆಯ ಮೇಲ್ವಿಚಾರಣೆ ಮಾಡಲು ಇದೇ ಏಪ್ರಿಲ್ 18ರಂದು ಬಾಂಬೆ ಹೈಕೋರ್ಟ್ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಅವರ ಪುತ್ರಿ ಮುಕ್ತಾ ದಾಭೋಲ್ಕರ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಇವರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸಿತು. ಮುಕ್ತಾ ದಾಭೋಲ್ಕರ್ ಪರವಾಗಿ ಹಿರಿಯ ವಕೀಲ ಆನಂದ್ ಗ್ರೋವರ್ ನ್ಯಾಯಪೀಠದ ಮುಂದೆ ಎರಡು ಪ್ರಮುಖ ವಿಷಯಗಳನ್ನು ಮಂಡಿಸಿದರು.
''ಮೊದಲನೆಯದಾಗಿ, ಸಿಬಿಐ ತನಿಖೆ ಪೂರ್ಣಗೊಳ್ಳುವ ಮುನ್ನವೇ ಹೈಕೋರ್ಟ್ ಈ ಆದೇಶ ಹೊರಡಿಸಿದೆ. ಎರಡನೆಯದಾಗಿ, ಪನ್ಸಾರೆ, ದಾಭೋಲ್ಕರ್, ಕಲಬುರ್ಗಿ, ಗೌರಿ ಲಂಕೇಶ್ ಅವರ ಹತ್ಯೆಗಳು ಪರಸ್ಪರ ಸಂಬಂಧ ಹೊಂದಿವೆ ಎಂದು ಪುರಾವೆಗಳು ಸೂಚಿಸುತ್ತವೆ. ಇದನ್ನು ಬಾಂಬೆ ಹೈಕೋರ್ಟ್ನ ಮುಂದೆ ಕೂಡ ಒತ್ತಿ ಹೇಳಲಾಗಿದೆ'' ಎಂದು ನ್ಯಾಯಪೀಠದ ಗಮನಕ್ಕೆ ವಕೀಲ ಆನಂದ್ ಗ್ರೋವರ್ ತಂದರು.
ಆಗ ನ್ಯಾಯಪೀಠವು, ''ವಿಚಾರಣೆ ನಡೆಯುತ್ತಿರುವುದರಿಂದ ಮತ್ತು ಹಲವಾರು ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಿ ವಿಚಾರಣೆ ನಡೆಸುತ್ತಿರುವುದರಿಂದ ತನಿಖೆಯಲ್ಲಿ ಮೇಲ್ವಿಚಾರಣೆ ಮಾಡಲು ಹೈಕೋರ್ಟ್ ನಿರಾಕರಿಸಿದೆ'' ಎಂದು ಹೇಳಿತು. ಇದಕ್ಕೆ ಪ್ರತಿಯಾಗಿ ವಕೀಲ ಗ್ರೋವರ್, ''ಇಂತಹ ಮೇಲ್ವಿಚಾರಣೆಯಲ್ಲಿ ತಪ್ಪೇನು?. ಅಲ್ಲದೇ, ಪರಾರಿಯಾಗಿರುವವರನ್ನು ಇದುವರೆಗೂ ಬಂಧಿಸಿಲ್ಲ'' ಎಂದು ವಾದ ಮಂಡಿಸಿದರು.
ಇದನ್ನೂ ಓದಿ:ಗೌರಿ - ಕಲಬುರ್ಗಿ ಹತ್ಯೆಗೆೆ ಬೈಕ್ ಸಪ್ಲೈ ಮಾಡಿದ್ದು ಒಬ್ಬನೇ.. SIT ತನಿಖೆಯಲ್ಲಿ ಸತ್ಯಾಂಶ ಬಯಲು!