ನವದೆಹಲಿ : ಕೇಂದ್ರ ಸರ್ಕಾರವು ತನ್ನ ಒಂದು ಕೋಟಿಗೂ ಹೆಚ್ಚು ಉದ್ಯೋಗಿಗಳು ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು (ಡಿಎ) ಶೇಕಡಾ 3ರಷ್ಟು ಹೆಚ್ಚಿಸುವ ಸಾಧ್ಯತೆಯಿದೆ. ಶೇ 3ರಷ್ಟು ತುಟ್ಟಿ ಭತ್ಯೆ ಹೆಚ್ಚಾದರೆ ಒಟ್ಟು ತುಟ್ಟಿಭತ್ಯೆ ಪ್ರಮಾಣ ಶೇ 45ಕ್ಕೆ ತಲುಪಲಿದೆ. ಹೊಸ ತುಟ್ಟಿಭತ್ಯೆ ಹೆಚ್ಚಳವು ಜುಲೈ 1, 2023 ರಿಂದ ಜಾರಿಗೆ ಬರಲಿದೆ. ಈ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಳ್ಳಲಾಗಿಲ್ಲವಾದರೂ, ತುಟ್ಟಿಭತ್ಯೆಯನ್ನು ಶೇ 4ರಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರಕ್ಕೆ ಕೋರಲಾಗಿದೆ ಎಂದು ಅಖಿಲ ಭಾರತ ರೈಲ್ವೆಮೆನ್ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಶಿವ ಗೋಪಾಲ್ ಮಿಶ್ರಾ ಹೇಳಿದರು.
"ಜೂನ್ 2023ರ ಸಿಪಿಐ-ಐಡಬ್ಲ್ಯೂ (Consumer Price Index for Industrial Workers -CPI-IW) ಅಂಕಿ ಅಂಶಗಳು ಜುಲೈ 31, 2023 ರಂದು ಪ್ರಕಟವಾಗಿವೆ. ಅದರಂತೆ ಶೇಕಡಾ 4ರಷ್ಟು ತುಟ್ಟಿಭತ್ಯೆ ಹೆಚ್ಚಳಕ್ಕೆ ನಾವು ಒತ್ತಾಯಿಸುತ್ತಿದ್ದೇವೆ. ಅಂಕಿ ಅಂಶಗಳ ಪ್ರಕಾರ ಶೇಕಡಾ 3ಕ್ಕಿಂತ ಸ್ವಲ್ಪ ಹೆಚ್ಚು ತುಟ್ಟಿಭತ್ಯೆ ಹೆಚ್ಚಿಸಬೇಕಾಗುತ್ತದೆ. ಆದರೆ ದಶಮಾಂಶ ಹಂತವನ್ನು ಮೀರಿ ಡಿಎಯನ್ನು ಹೆಚ್ಚಿಸಲು ಸರ್ಕಾರ ಪರಿಗಣಿಸುವುದಿಲ್ಲ. ಹೀಗಾಗಿ ಡಿಎಯನ್ನು ಶೇಕಡಾ 3ರಷ್ಟು ಹೆಚ್ಚಿಸಿ ಶೇ 45 ಮಾಡುವ ಸಾಧ್ಯತೆಯಿದೆ" ಎಂದು ಮಿಶ್ರಾ ತಿಳಿಸಿದ್ದಾರೆ.
ತುಟ್ಟಿಭತ್ಯೆಯನ್ನು ವರ್ಷಕ್ಕೆ ಎರಡು ಬಾರಿ ನಿಯತಕಾಲಿಕವಾಗಿ ಪರಿಷ್ಕರಿಸಲಾಗುತ್ತದೆ. ಈ ಹಿಂದೆ ಮಾರ್ಚ್ 24, 2023ರಂದು ಡಿಎ ಹೆಚ್ಚಳ ಪರಿಷ್ಕರಣೆ ಮಾಡಲಾಗಿತ್ತು ಮತ್ತು ಜನವರಿ 1, 2023ರಿಂದ ಅದು ಜಾರಿಗೆ ಬಂದಿತ್ತು. ಆ ಸಮಯದಲ್ಲಿ ಡಿಸೆಂಬರ್ 2022 ಕ್ಕೆ ಕೊನೆಗೊಂಡ ಅವಧಿಯಲ್ಲಿ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕದ 12 ಮಾಸಿಕ ಸರಾಸರಿಯಲ್ಲಿನ ಶೇಕಡಾವಾರು ಹೆಚ್ಚಳದ ಆಧಾರದ ಮೇಲೆ ಕೇಂದ್ರ ಸರ್ಕಾರವು ಡಿಎಯನ್ನು ಶೇ 38 ರಿಂದ 42ಕ್ಕೆ ಅಂದರೆ ಶೇ 4ರಷ್ಟು ಹೆಚ್ಚಿಸಿತ್ತು.