ಥಾಣೆ(ಮಹಾರಾಷ್ಟ್ರ): ಸೆಪ್ಟೆಂಬರ್ 4ರಂದು ನಡೆದ ಭೀಕರ ರಸ್ತೆ ಅಪಘಾತದಲ್ಲಿ ಟಾಟಾ ಸನ್ಸ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ದುರ್ಮರಣಕ್ಕೀಡಾಗಿದ್ದು, ಅಪಘಾತಕ್ಕೀಡಾದ ಕಾರಿನ ಬಗ್ಗೆ ತನಿಖೆ ನಡೆಸುವ ಉದ್ದೇಶದಿಂದ ಮರ್ಸಿಡಿಸ್ ಬೆಂಜ್ ಕಾರಿನ ತಜ್ಞರು ಹಾಂಗ್ಕಾಂಗ್ನಿಂದ ಮುಂಬೈಗೆ ಆಗಮಿಸಿದ್ದಾರೆ.
ತಂಡ ಈಗಾಗಲೇ ಮುಂಬೈಗೆ ಆಗಮಿಸಿದ್ದು, ಕಾರಿನ ಬಗ್ಗೆ ತನಿಖೆ ಆರಂಭಿಸಲಿದ್ದಾರೆ. ಅಪಘಾತಕ್ಕೀಡಾದ ಕಾರನ್ನ ಥಾಣೆಯ ಮರ್ಸಿಡಿಸ್ ಶೋ ರೂಂನಲ್ಲಿ ಇಡಲಾಗಿದೆ. ಪ್ರಸಿದ್ಧ ಕೈಗಾರಿಕೋದ್ಯಮಿ ಮತ್ತು ಟಾಟಾ ಸನ್ಸ್ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಸೆಪ್ಟೆಂಬರ್ 4ರಂದು ನಡೆದ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಅಹಮದಾಬಾದ್ನಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ವೇಳೆ ಅವರ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರ ಪೈಕಿ, ಸೈರಸ್ ಮಿಸ್ತ್ರಿ ಹಾಗೂ ಮತ್ತೋರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಹಾಂಗ್ಕಾಂಗ್ನಿಂದ ಆಗಮಿಸಿರುವ ತಂಡ ಈಗಾಗಲೇ ಮುಂಬೈ ತಲುಪಿದೆ ಎಂದು ಪಾಲ್ಘರ್ ಎಸ್ಪಿ ಬಾಳಾಸಾಹೇಬ್ ಪಾಟೀಲ್ ತಿಳಿಸಿದ್ದು, ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಕಾರಿನ ತನಿಖೆ ನಡೆಯಲಿದೆ. ಎಲ್ಲರೂ ತಾಂತ್ರಿಕ ತಜ್ಞರಾಗಿದ್ದು, ಮರ್ಸಿಡಿಸ್ ಬೆಂಜ್ ಕಂಪನಿಗೆ ತನಿಖೆಯ ವರದಿ ಸಲ್ಲಿಕೆ ಮಾಡಲಿದೆ.ಮುಖ್ಯವಾಗಿ ಅಪಘಾತ ನಡೆದ ಸಂದರ್ಭದಲ್ಲಿ ಏರ್ಬ್ಯಾಗ್ ಏಕೆ ತೆರೆದುಕೊಂಡಿಲ್ಲ ಎಂಬ ಪ್ರಶ್ನೆ ಉದ್ಭವವಾಗಿದ್ದು, ಅದರ ಬಗ್ಗೆ ಇದೀಗ ಉತ್ತರ ಸಿಗಲಿದೆ.
ಇದನ್ನೂ ಓದಿ:ಪಂಚಭೂತಗಳಲ್ಲಿ ಲೀನವಾದ ಸೈರಸ್ ಮಿಸ್ತ್ರಿ.. ಅಂತಿಮ ದರ್ಶನ ಪಡೆದ ರತನ್ ಟಾಟಾ, ಅನಿಲ್ ಅಂಬಾನಿ
ಖ್ಯಾತ ಉದ್ಯಮಿ ರತನ್ ಟಾಟಾ ಅವರು ಟಾಟಾ ಸನ್ಸ್ ಗ್ರೂಪ್ನಿಂದ ನಿವೃತ್ತಿ ಘೋಷಿಸಿದ ಬಳಿಕ ಸೈರಸ್ ಮಿಸ್ತ್ರಿ ಅವರು 2012 ರಲ್ಲಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. 4 ವರ್ಷಗಳಲ್ಲಿ ಗ್ರೂಪ್ನ ಇನ್ನಿತರ ಉದ್ಯೋಗಿಗಳೊಂದಿಗಿನ ಮನಸ್ತಾಪದಿಂದ ಅವರು 2016 ರಲ್ಲಿ ಅವರು ಟಾಟಾ ಸನ್ಸ್ ಅಧ್ಯಕ್ಷ ಸ್ಥಾನದಿಂದ ಬಲವಂತವಾಗಿ ಕೆಳಗಿಳಿಯಬೇಕಾಯಿತು.