ಮುಂಬೈ (ಮಹಾರಾಷ್ಟ್ರ): ಟಾಟಾ ಸಮೂಹದ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರ ಕಾರು ಅಪಘಾತ ಘಟನೆ ಕುರಿತಂತೆ ಪೊಲೀಸರು ಮಾಹಿತಿಯನ್ನು ಕಲೆ ಹಾಕಿದ್ದಾರೆ. ಮಿಸ್ತ್ರಿ ಪ್ರಯಾಣಿಸುತ್ತಿದ್ದ ಮರ್ಸಿಡಿಸ್ ಕಾರಿನಲ್ಲಿ ಒಟ್ಟಾರೆ ನಾಲ್ವರಿದ್ದರು ಮತ್ತು ಮುಂಬೈನ ವೈದ್ಯೆಯೊಬ್ಬರು ಕಾರು ಚಾಲನೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತ, ಘಟನೆ ಬಗ್ಗೆ ತನಿಖೆ ನಡೆಸುವಂತೆ ಮಹಾರಾಷ್ಟ್ರ ಗೃಹ ಸಚಿವ ದೇವೇಂದ್ರ ಫಡ್ನವೀಸ್ ಆದೇಶಿಸಿದ್ದಾರೆ.
ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಸೂರ್ಯ ನದಿಯ ಸೇತುವೆ ಬಳಿ ಭಾನುವಾರ ಮಧ್ಯಾಹ್ನ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸೈರಸ್ ಮಿಸ್ತ್ರಿ (54) ನಿಧನರಾಗಿದ್ದರು. ಅಹಮದಾಬಾದ್‌ನಿಂದ ಮುಂಬೈಗೆ ಬರುತ್ತಿದ್ದಾಗ ಡಿವೈಡರ್‌ಗೆ ಕಾರು ಡಿಕ್ಕಿ ಹೊಡೆದು ದುರಂತ ಸಂಭವಿಸಿತ್ತು. ಇದೀಗ ಈ ಘಟನೆಯಲ್ಲಿ ಸೈರಸ್ ಮಿಸ್ತ್ರಿ ಮತ್ತು ಕಾರಿನಲ್ಲಿದ್ದ ಮತ್ತೊಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಸೈರಸ್ ಮಿಸ್ತ್ರಿ ಸಾವಿಗೆ ಕಾರಣವಾದ ಮತ್ತು ಅಪಘಾತಕ್ಕೀಡಾದ ಕಾರನ್ನು ಮುಂಬೈನ ಖ್ಯಾತ ಸ್ತ್ರೀರೋಗ ತಜ್ಞೆ ಅನಾಹಿತಾ ಪಾಂಡೋಲೆ (55) ಚಲಾಯಿಸುತ್ತಿದ್ದರು. ಅಲ್ಲದೇ, ಕಾರಿನಲ್ಲಿ ಸೈರಸ್ ಮಿಸ್ತ್ರಿ ಅವರೊಂದಿಗೆ ಅನಾಹಿತಾ ಪತಿ ಡೇರಿಯಸ್ ಪಾಂಡೋಲೆ (60) ಹಾಗೂ ಡೇರಿಯಸ್ ಅವರ ಸಹೋದರ ಜಹಾಂಗೀರ್ ಪಾಂಡೋಲೆ ಕೂಡ ಇದ್ದರು. ಈ ಘಟನೆಯಲ್ಲಿ ಸೈರಸ್ ಮಿಸ್ತ್ರಿ ಹಾಗೂ ಜಹಾಂಗೀರ್ ಪಾಂಡೋಲೆ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ರಸ್ತೆ ಅಪಘಾತದಲ್ಲಿ ಟಾಟಾ ಸಮೂಹದ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಸಾವು: ಈಟಿವಿ ಭಾರತ ಎಕ್ಸ್ಕ್ಲೂಸಿವ್ ವಿಡಿಯೋ