ಪಾಣಿಪತ್:ಪಾಣಿಪತ್ನ ತಹಸಿಲ್ ಕ್ಯಾಂಪ್ ಎಂಬಲ್ಲಿ ಗುರುವಾರ ಸಿಲಿಂಡರ್ ಸ್ಫೋಟ ಸಂಭವಿಸಿದೆ. ಪರಿಣಾಮ ಒಂದೇ ಕುಟುಂಬದ ಆರು ಮಂದಿ ಮೃತಪಟ್ಟಿರುವ ಘಟನೆ ಗುರುವಾರ ಬೆಳಗ್ಗೆ ಸಂಭವಿಸಿದೆ. ಟೀ ಮಾಡಲೆಂದು ಅವರು ಗ್ಯಾಸ್ ಆನ್ ಮಾಡಿದಾಗ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದಿಂದ ಭಾರಿ ಬೆಂಕಿ ಆವರಿಸಿದ್ದು ಪತಿ - ಪತ್ನಿ ಸೇರಿದಂತೆ ನಾಲ್ವರು ಮಕ್ಕಳು ಸಜೀವ ದಹನವಾಗಿದ್ದಾರೆ. ಅಬ್ದುಲ್ ಕರೀಂ (50), ಅಫ್ರೋಜಾ (46), ಇಶ್ರತ್ ಖಾತೂನ್ (18), ರೇಷ್ಮಾ (17), ಅಫ್ಫಾನ್ (7) ಮತ್ತು ಅಬ್ದುಲ್ ಶಕುರ್ (10) ಮೃತಪಟ್ಟ ದುರ್ದೈವಿಗಳು.
ಮೃತರು ಮೂಲತಃ ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರ ಜಿಲ್ಲೆಯ ನಿವಾಸಿಗಳು ಎಂದು ತಿಳಿದು ಬಂದಿದೆ. ಒಂದೂವರೆ ವರ್ಷದ ಹಿಂದೆ ಈ ಕುಟುಂಬ ಪಾಣಿಪತ್ ತಹಸಿಲ್ ಕ್ಯಾಂಪ್ಗೆ ಬಂದು ನೆಲೆಸಿತ್ತು. ಪತಿ-ಪತ್ನಿ ಇಬ್ಬರೂ ಕುಟುಂಬ ನಿರ್ವಹಣೆಗಾಗಿ ದಿನಗೂಲಿ ಕೆಲಸಕ್ಕೆ ತೆರಳುತ್ತಿದ್ದರು ಎಂಬ ಮಾಹಿತಿ ಇದೆ.
ಮಗಳ ಮದುವೆಗೆ ತಯಾರಿ ನಡೆಸಿದ್ದ ಕುಟುಂಬ:ಮೃತರಲ್ಲಿ ಓರ್ವ ಹಿರಿಯ ಮಗಳಿಗೆ ಸದ್ಯದಲ್ಲೇ ನಿಖಾ ಮಾಡುವ ನಿರ್ಧಾರ ಮಾಡಲಾಗಿತ್ತು.ಅಬ್ದುಲ್ ಕರೀಂ ಮತ್ತು ಅವರ ಪತ್ನಿ ಅಫ್ರೋಜಾ ತಮ್ಮ ಇಬ್ಬರು ಪುತ್ರರೊಂದಿಗೆ ಪಾಣಿಪತ್‌ನಲ್ಲಿ ವಾಸಿಸುತ್ತಿದ್ದರು. ತಮ್ಮ ಇಬ್ಬರು ಹೆಣ್ಣುಮಕ್ಕಳು ಪಶ್ಚಿಮ ಬಂಗಾಳದಲ್ಲಿ ವಾಸಿಸುತ್ತಿದ್ದರು. ಹಿರಿಯ ಪುತ್ರಿ ಇಶ್ರತ್ ಖಾತೂನ್ ಅವರ ಮದುವೆ ಮಾಡುವ ಉದ್ದೇಶದಿಂದ ಒಂದು ತಿಂಗಳ ಹಿಂದೆಯಷ್ಟೇ ಅಬ್ದುಲ್ ಕರೀಂ ತನ್ನ ಮಕ್ಕಳನ್ನು ಪಾಣಿಪತ್ಗೆ ಕರೆಸಿಕೊಂಡಿದ್ದರು. ಬರುವ ಭಾನುವಾರ ಇಶ್ರತ್ ಖಾತೂನ್ ನೋಡಲೆಂದು ಹುಡುಗನ ಕಡೆಯವರು ಬರಲು ಸಹ ತಿಳಿಸಿದ್ದರು. ಆದರೆ, ಇಷ್ಟರಲ್ಲಿ ಈ ದುರಂತ ಸಂಭವಿಸಿದೆ ಎಂದು ಡಿಎಸ್ಪಿ ಧರಂವೀರ್ ತಿಳಿಸಿದ್ದಾರೆ.
ಇದನ್ನೂ ಓದಿ:ಮೆಟ್ರೋ ಪಿಲ್ಲರ್ ಕುಸಿತ ಪ್ರಕರಣ: ಪೊಲೀಸ್ ವಿಚಾರಣೆಗೆ ಹಾಜರಾದ ಬಿಎಂಆರ್ಸಿಎಲ್ ಅಧಿಕಾರಿಗಳು