ಚೆನ್ನೈ( ತಮಿಳುನಾಡು): ಮ್ಯಾಂಡೌಸ್ ಚಂಡಮಾರುತವು ತಡರಾತ್ರಿ ತಮಿಳುನಾಡಿನ ಕರಾವಳಿಗೆ ಅಪ್ಪಳಿಸಿದ್ದು, ಮಾಮಲ್ಲಪುರಂ ಬಳಿ ಭೂಕುಸಿತ ಉಂಟು ಮಾಡಿದೆ. ತಮಿಳುನಾಡಿನ ಕರಾವಳಿಯಲ್ಲಿ ಸಾಧಾರಣದಿಂದ ಭಾರಿ ಮಳೆಯಾಗುತ್ತಿದೆ. ಚಂಡಮಾರುತದಿಂದ ಭೂಕುಸಿತವೂ ಭಾರಿ ಪ್ರಮಾಣದಲ್ಲಿ ಪ್ರಾರಂಭವಾಗಿದೆ ಎಂದು ಹವಾಮಾನ ಕೇಂದ್ರದ ಮುಖ್ಯಸ್ಥ ಎಸ್ ಬಾಲಚಂದ್ರನ್ ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಚಂಡಮಾರುತದಿಂದ ಆಗುವ ಭಾರಿ ಅನಾಹುತಗಳನ್ನು ತಡೆಯಲು ಸಿದ್ಧತೆಗಳನ್ನ ಮಾಡಿಕೊಳ್ಳಲಾಗಿದೆ. ಭದ್ರತೆ, ಪರಿಹಾರ ಮತ್ತು ರಕ್ಷಣಾ ಕಾರ್ಯಗಳಿಗಾಗಿ 16,000 ಪೊಲೀಸ್ ಸಿಬ್ಬಂದಿ ಮತ್ತು 1,500 ಗೃಹ ರಕ್ಷಕ ದಳದ ಸಿಬ್ಬಂದಿಯನ್ನ ನಿಯೋಜಿಸಲಾಗಿದೆ. 12 ಜಿಲ್ಲಾ ವಿಪತ್ತು ನಿರ್ವಹಣಾ ಪಡೆ ತಂಡಗಳ ಜೊತೆಗೆ ತಮಿಳು ರಾಜ್ಯ ವಿಪತ್ತು ನಿರ್ವಹಣಾ ಪಡೆಯ 40 ಸದಸ್ಯರ ತಂಡವು ಸನ್ನದ್ಧ ಸ್ಥಿತಿಯಲ್ಲಿದೆ ಎಂದು ತಮಿಳುನಾಡು ಸರ್ಕಾರದ ಮೂಲಗಳು ತಿಳಿಸಿವೆ.
ಈಗಾಗಲೇ ಎನ್‌ಡಿಆರ್‌ಎಫ್ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆಗಳ ಸುಮಾರು 400 ಸಿಬ್ಬಂದಿಗಳು ಕಾವೇರಿ ನದಿ ಮುಖಜ ಭೂಮಿ ಸೇರಿದಂತೆ ಕರಾವಳಿ ಪ್ರದೇಶಗಳಲ್ಲಿ ಬೀಡುಬಿಟ್ಟಿದ್ದಾರೆ.