ನವದೆಹಲಿ:ಅರಬ್ಬೀ ಸಮುದ್ರದಲ್ಲಿ ಹುಟ್ಟಿಕೊಂಡು ಗುಜರಾತ್‌ನ ಕರಾವಳಿ ಪ್ರದೇಶಗಳಲ್ಲಿ ಅಬ್ಬರಿಸಿ ಬೊಬ್ಬಿರಿದ 'ಬಿಪರ್‌ಜೋಯ್' ಚಂಡಮಾರುತ ದುರ್ಬಲವಾಗುತ್ತಿದೆ. ಮುಂದಿನ 12 ಗಂಟೆಗಳಲ್ಲಿ ಇದು ಇನ್ನಷ್ಟು ಶಕ್ತಿ ಕಳೆದುಕೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಶನಿವಾರ ತಿಳಿಸಿದೆ. ಪಾಕಿಸ್ತಾನದಲ್ಲೂ ಹಾನಿ ಭೀತಿ ಸೃಷ್ಟಿಸಿದ್ದ ಸೈಕ್ಲೋನ್ ಕ್ರಮೇಣ ತಣ್ಣಗಾಗಿದೆ. ಹೀಗಾಗಿ ನೆರೆಯ ರಾಷ್ಟ್ರವೂ ಕೂಡ ಹಾನಿಯಿಂದ ಪಾರಾಗಿದೆ ಎಂದು ಐಎಂಎಡಿ ತಿಳಿಸಿದೆ.
ಚಂಡಮಾರುತವು ನಿನ್ನೆ ರಾತ್ರಿ 11.30 ನಿಮಿಷಕ್ಕೆ ಆಗ್ನೇಯ ಪಾಕಿಸ್ತಾನದ ನೈಋತ್ಯ ಭಾಗದತ್ತ ಸಾಗಿತು. ರಾಜಸ್ಥಾನ ಮತ್ತು ಕಛ್ನ ಧೋಲಾವಿರಾದಿಂದ ಸುಮಾರು 100 ಕಿಮೀ ದೂರದಲ್ಲಿ ಈಶಾನ್ಯ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿ ದುರ್ಬಲಗೊಂಡಿತು ಎಂದು ಐಎಂಡಿ ಟ್ವೀಟ್‌ನಲ್ಲಿ ಹಂಚಿಕೊಂಡಿದೆ. ಇನ್ನು ರಾಜಸ್ಥಾನದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಇಲ್ಲೂ ಅಲ್ಲಿನ ಸರ್ಕಾರ ಭಾರಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.
ಜೊತೆಗೆ ಬಿಪರ್‌ಜೋಯ್ ಕಛ್ ಮತ್ತು ರಾಜಸ್ಥಾನದತ್ತ ಸಾಗಿದ್ದು, ಅಲ್ಲಿ ಮಳೆ ಸುರಿಸುತ್ತಿದೆ. ಚಂಡಮಾರುತದ ಪ್ರಭಾವದಿಂದ ಕಛ್ನ ಭುಜ್‌ನಲ್ಲಿ ಹಲವಾರು ಮರಗಳು ನೆಲಕ್ಕುರುಳಿವೆ. ವಿದ್ಯುತ್ ಸಂಪರ್ಕವೂ ಕಡಿತವಾಗಿದೆ ಎಂದು ವರದಿಯಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡ ತೆರವು ಕಾರ್ಯ ನಡೆಸುತ್ತಿದೆ.
ಅರಬ್ಬೀ ಸಮುದ್ರದಲ್ಲಿ ಹುಟ್ಟಿ ಭಾರತದ ಪಶ್ಚಿಮ ಕರಾವಳಿಯಾದ್ಯಂತ ಬೀಸಿದ ಚಂಡಮಾರುತವು ಜೂನ್ 15ರ ರಾತ್ರಿ ಕಛ್ನ ಜಖೌ ಬಂದರಿನಲ್ಲಿ 10 ಕಿಮೀ ದೂರದಲ್ಲಿ ಅನಾಹುತ ಸೃಷ್ಟಿಸಿದೆ. ಇದರ ಮುನ್ಸೂಚನೆ ಅರಿತಿದ್ದ ಕಾರಣ ಅಲ್ಲಿನ ಸರ್ಕಾರ 6 ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ತಂಡಗಳ ನೆರವಿನಿಂದ ರೂಪೆನ್ ಬಂದರ್ ಸರ್ಕಾರಿ ಪ್ರಾಥಮಿಕ ಶಾಲೆಯಿಂದ 127 ನಾಗರಿಕರನ್ನು ಸ್ಥಳಾಂತರಿಸಿ ದ್ವಾರಕಾದ ಎನ್‌ಡಿಎಚ್ ಶಾಲೆಗೆ ಸ್ಥಳಾಂತರಿಸಿದ್ದರು. ಹೀಗಾಗಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
NDRF ಪ್ರಕಾರ, ಸ್ಥಳಾಂತರಿಸಿದ ನಾಗರಿಕರಲ್ಲಿ 82 ಪುರುಷರು, 27 ಮಹಿಳೆಯರು ಮತ್ತು ಮಕ್ಕಳು 15 ಮಕ್ಕಳು ಸೇರಿದ್ದಾರೆ. 'ಬಿಪರ್‌ಜೋಯ್' ಚಂಡಮಾರುತವು ರಾಜ್ಯದಲ್ಲಿ ಪ್ರತಾಪ ತೋರಿಸಿದ್ದರಿಂದ ಮುಂದಿನ ಎರಡು ದಿನಗಳ ಕಾಲ ರಾಜ್ಯದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ಪಶ್ಚಿಮ ರೈಲ್ವೆ ಚಂಡಮಾರುತ ಪೀಡಿತ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಇನ್ನೂ ಕೆಲವು ರೈಲುಗಳ ಕಾರ್ಯಾಚರಣೆಯನ್ನು ರದ್ದುಗೊಳಿಸಲು ಮತ್ತು ಭಾಗಶಃ ರದ್ದುಗೊಳಿಸಲು ನಿರ್ಧರಿಸಿದೆ.
ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಗಾಂಧಿನಗರದ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದಲ್ಲಿ ಬಿಪರ್‌ಜೋಯ್ ಚಂಡಮಾರುತ ಉಂಟು ಮಾಡಿದ ಹಾನಿ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಅವಲೋಕಿಸಲು ಸಭೆ ನಡೆಸಿದರು. ಚಂಡಮಾರುತದ ಕಾರಣಕ್ಕಾಗಿ ಆದ ಹಾನಿಯನ್ನು ಅಂದಾಜಿಸಲು ಸಮೀಕ್ಷೆ ನಡೆಸುವಂತೆ ಸಂತ್ರಸ್ತ ಪ್ರದೇಶಗಳ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದರು. ಹಾನಿಗೀಡಾದ ಆಸ್ತಿಗಳ ಪೈಕಿ 414 ಫೀಡರ್‌ಗಳು, 221 ವಿದ್ಯುತ್ ಕಂಬಗಳು ಮತ್ತು ಒಂದು ವಿದ್ಯುತ್ ಪರಿವರ್ತಕ ತಕ್ಷಣವೇ ಕಾರ್ಯಗತಗೊಳಿಸಲಾಗಿದೆ. ಜಾಮ್‌ನಗರ ಜಿಲ್ಲೆಯ 367 ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆಯನ್ನು ಪುನಃಸ್ಥಾಪಿಸಲಾಗಿದೆ.
"ಚಂಡಮಾರುತದಲ್ಲಿ ಇಪ್ಪತ್ನಾಲ್ಕು ಪ್ರಾಣಿಗಳು ಸಾವನ್ನಪ್ಪಿವೆ. 23 ಜನರು ಗಾಯಗೊಂಡಿದ್ದಾರೆ. ಸುಮಾರು ಒಂದು ಸಾವಿರ ಹಳ್ಳಿಗಳಿಗೆ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ. 800 ಮರಗಳು ಬಿದ್ದಿವೆ. ರಾಜ್‌ಕೋಟ್ ಹೊರತುಪಡಿಸಿ ಎಲ್ಲಿಯೂ ಭಾರೀ ಮಳೆಯಾಗಿಲ್ಲ ಎಂದು ಎನ್‌ಡಿಆರ್‌ಎಫ್ ಡಿಜಿ ಕರ್ವಾಲ್ ಹೇಳಿದ್ದಾರೆ.
ಸೈಕ್ಲೋನ್ ಸಮರ್ಥವಾಗಿ ಎದುರಿಸಿದ್ದೇವೆ:ಯಾವುದೇ ಪ್ರಾಣಾಪಾಯವಿಲ್ಲದೆ ದೊಡ್ಡ ವಿಪತ್ತನ್ನು ಸಮರ್ಥವಾಗಿ ಎದುರಿಸಿದ್ದೇವೆ. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮತ್ತು ಇತರ ರಕ್ಷಣಾ ತಂಡಗಳು ಚಂಡಮಾರುತ ಸೃಷ್ಟಿಸಿರುವ ಹಾನಿಯನ್ನು ಸರಿಪಡಿಸಲು ದಣಿವರಿಯದೇ ಕೆಲಸ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಪೂರ್ವ ಸಿದ್ಧತೆ ಮಾಡಿಕೊಂಡಿದ್ದೆವು. ಜನರ ಜೀವನವನ್ನು ಮರಳಿ ಸ್ಥಾಪಿಸುವುದು. ಯಥಾಸ್ಥಿತಿಗೆ ಮರಳುವುದು ದೊಡ್ಡ ಸವಾಲಾಗಿದೆ ಎಂದು ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಹೇಳಿದ್ದಾರೆ.
ಇದನ್ನೂ ಓದಿ;ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಬಿಪರ್ಜಾಯ್.. ಜಾನುವಾರುಗಳನ್ನು ರಕ್ಷಿಸಲು ತೆರಳಿದ್ದ ತಂದೆ - ಮಗ ಸಾವು.. ಹಲವರಿಗೆ ಗಾಯ