ಚೆನ್ನೈ(ತಮಿಳುನಾಡು): ನಿವಾರ್ ಚಂಡಮಾರುತದಿಂದ ತಮಿಳುನಾಡು, ಪುದುಚೇರಿಯ ಹಲವೆಡೆ ಭಾರಿ ಮಳೆ ಮಳೆಯಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಸದ್ಯ ಹಲವೆಡೆ ಭಾರಿ ಗಾಳಿ ಬೀಸುತ್ತಿದ್ದು, ಮತ್ತಷ್ಟು ಸಮಸ್ಯೆ ತಲೆದೋರುವ ಆತಂಕ ಎದುರಾಗಿದೆ.
ನಿವಾರ್ ಚಂಡಮಾರುತ ತನ್ನ ಸ್ಥಳಾಂತರ ಪ್ರಕ್ರಿಯೆ ಮುಂದುವರೆಸಿದ್ದು, ಪುದುಚೇರಿ ಬಳಿಯ ಕರಾವಳಿಯನ್ನು ಈಗಾಗಲೇ ದಾಟಿದೆ. ಸದ್ಯ ಚಂಡಮಾರುತ ತನ್ನ ತೀಕ್ಷ್ಣತೆಯನ್ನು ನಿಧಾನಗತಿಯಲ್ಲಿ ಕಳೆದುಕೊಳ್ಳುತ್ತಿದೆ.
ಪುದುಚೇರಿ ಮತ್ತು ಕುಡಲೋರ್ ಕರಾವಳಿಯಲ್ಲಿ ಭಾರಿ ಗಾಳಿ ಸಹಿತ ಮಳೆಯಾಗುತ್ತಿದ್ದು, ಚೆನ್ನೈನಲ್ಲೂ ನಿವಾರ್ ಪರಿಣಾಮ ಕುಂಭದ್ರೋಣ ಮಳೆ ಸುರಿಯುತ್ತಿದೆ. ಪುದುಚೇರಿಯಿಂದ 30 ಕಿ.ಮೀ. ಚೆನ್ನೈನಿಂದ 115 ಕಿಮೀ. ದಕ್ಷಿಣಕ್ಕೆ ನಿವಾರ್ ಅಪ್ಪಳಿಸಿದೆ. ಈಗಾಗಲೇ ಮರಕ್ಕಣಮ್ ಸಮೀಪ ಅಪ್ಪಳಿಸಿದ ಸೈಕ್ಲೋನ್ ಪ್ರಭಾವ ಕಡಿಮೆಯಾಗಲು ಇನ್ನೂ 3 ಗಂಟೆ ಬೇಕೆಂದು ಅಂದಾಜಿಸಲಾಗಿದೆ.
ನಿವಾರ್ ಚಂಡಮಾರುತದ ಅನಾಹುತ ತಪ್ಪಿಸಲು ಸೂಕ್ತ ಕ್ರಮ: ಸಿಎಂ
ಚಂಡಮಾರುತದ ಹಿನ್ನೆಲೆ ತಗ್ಗು ಪ್ರದೇಶದ ಜನರನ್ನು ಸ್ಥಳಾಂತರಿಸಿ, ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ರಕ್ಷಣಾ ಕಾರ್ಯ ಮುಂದುವರೆದಿದೆ.