ಕೋಲ್ಕತ್ತಾ( ಪಶ್ಚಿಮ ಬಂಗಾಳ): ಕೊರೊನಾದಿಂದ ನಲುಗಿರುವ ರಾಜ್ಯಗಳಲ್ಲೀಗ ಯಾಸ್ ಚಂಡಮಾರುತದ ಭೀತಿ ಎದುರಾಗಿದೆ. ಈಗಾಗಲೇ ರಾಜ್ಯದ ಹಲವೆಡೆ ಭಾರಿ ಮಳೆಯಾಗುತ್ತಿದ್ದು, ಸಿಡಿಲಿನಿಂದ ಇಬ್ಬರು ಮೃತಪಟ್ಟು 4ರಿಂದ 5 ಮಂದಿ ಗಾಯಗೊಂಡಿರುವುದಾಗಿ ನೀರಾವರಿ ಸಚಿವ ಸೌಮೆನ್ ಕುಮಾರ್ ಮಹಾಪಾತ್ರ ಮಾಹಿತಿ ನೀಡಿದ್ದಾರೆ. ಇದಲ್ಲದೇ 24 ಪರಗಣ ಪ್ರದೇಶದಲ್ಲಿ 40ಕ್ಕೂ ಹೆಚ್ಚಿನ ಮನೆಗಳಿಗೆ ಹಾನಿಯಾಗಿದೆ.
ಇನ್ನು ಸಿಎಂ ಮಮತಾ ಬ್ಯಾನರ್ಜಿ ಖುದ್ದು ಚಂಡಮಾರುತದ ಅನಾಹುತ ತಡೆಯಲು ಕಾರ್ಯ ಪ್ರವೃತ್ತರಾಗಿದ್ದಾರೆ. ಪೂರ್ವ ರೈಲ್ವೆ ವಲಯದ ಮಾಲ್ಡಾ - ಬಲೂರ್‌ಘಾಟ್ ಪ್ರಯಾಣಿಕರ ವಿಶೇಷ ರೈಲು ಸೇವೆಯನ್ನು ಮೇ 26 ಮತ್ತು ಮೇ 27 ರಂದು ರದ್ದುಗೊಳಿಸಿ ಇಲಾಖೆ ಪ್ರಕಟಣೆ ಹೊರಡಿಸಿದೆ. ಇಷ್ಟೇ ಅಲ್ಲದೇ ಒಟ್ಟು 38 ರೈಲು ಪ್ರಯಾಣವನ್ನು ರದ್ಧು ಪಡಿಸಿದ್ದು, ಮೊದಲೇ ಟಿಕೆಟ್ ಕಾಯ್ದಿರಿಸಿರುವವರಿಗೆ ಹಣ ಮರುಪಾವತಿ ಮಾಡುವುದಾಗಿ ರೈಲ್ವೆ ಇಲಾಖೆ ತಿಳಿಸಿದೆ.
ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಎಲ್ಲಾ ವಿಮಾನ ಸೇವೆಯನ್ನು ನಿರ್ಬಂಧಿಸಲಾಗಿದೆ. ಅಲ್ಲದೇ ಯಾವುದೇ ಸನ್ನಿವೇಶವನ್ನಾದರೂ ಎದುರಿಸುವಂತೆ ಸಿಎಂ ಮಮತಾ ಬ್ಯಾನರ್ಜಿ ಎಲ್ಲಾ ಇಲಾಖೆಗಳಿಗೂ ಸೂಚಿಸಿದ್ದಾರೆ. ಈಗಾಗಲೇ ಬಂಗಾಳ ಕೊಲ್ಲಿಯಿಂದ 155-165 ಕಿ.ಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದ್ದು, ರಕ್ಷಣಾ ಪಡೆಗಳು ಬೀಡುಬಿಟ್ಟಿವೆ. ಅಲ್ಲದೇ ಈ ಗಾಳಿಯ ವೇಗವು 185 ಕಿ.ಮೀಟರ್ ವರೆಗೂ ತಲುಪಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.