ತೌಕ್ತೆ: ಮುಂದಿನ ಕೆಲ ಗಂಟೆಗಳಲ್ಲಿ ತನ್ನ ತೀವ್ರತೆಯನ್ನು ಹೆಚ್ಚಿಸಿಕೊಳ್ಳಲಿರುವ ತೌಕ್ತೆ ಚಂಡಮಾರುತ ಇಂದು ಮುಂಬೈ ಕರಾವಳಿ ಮೂಲಕ ಹಾದು ಸಂಜೆ ವೇಳೆಗೆ ಗುಜರಾತ್ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ.
ಹೀಗಾಗಿ ಮುಂಬೈನಲ್ಲಿ ಮುಂದಿನ ಮೂರು ಗಂಟೆಗಳಲ್ಲಿ ಬಲವಾದ ಗಾಳಿ ಬೀಸಲಿದ್ದು, ಅನೇಕ ಪ್ರದೇಶಗಳಲ್ಲಿ ಭಾರಿ ಮಳೆಯಾಗಲಿದೆ. ಐಎಂಡಿ ಎಚ್ಚರಿಕೆ ಮೇರೆಗೆ ಮುಂಬೈನಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಮುಂಬೈ ಏರ್ಪೋರ್ಟ್ ಮಧ್ಯಾಹ್ನ 2 ಗಂಟೆಯವರಗೆ ಬಂದ್ ಮಾಡಲಾಗಿದೆ. ಮುಂಬೈನ ಪಶ್ಚಿಮ ಭಾಗಗಳ ಪ್ರದೇಶದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್)ಯ ಮೂರು ತಂಡಗಳು ಬೀಡುಬಿಟ್ಟಿದ್ದು, ಭಾರತೀಯ ನೌಕಾಪಡೆಯ ತಂಡಗಳೂ ಸಹ ಕಾರ್ಯಾಚರಣೆಗೆ ಸಿದ್ಧವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ತೌಕ್ತೆ ಅಬ್ಬರ: ಚಂಡಮಾರುತಕ್ಕೆ ನಾಲ್ವರು ಬಲಿ, 216 ಮನೆಗಳಿಗೆ ಹಾನಿ
ಮುಂಬೈ ಅಗ್ನಿಶಾಮಕ ದಳದ ಪ್ರವಾಹ ರಕ್ಷಣಾ ಘಟಕದ ಆರು ತಂಡಗಳನ್ನು ನಗರದ ಆರು ಕಡಲತೀರಗಳಲ್ಲಿ ನಿಯೋಜಿಸಲಾಗಿದೆ. ಬೃಹನ್ ಮುಂಬೈ ಮಹಾನಗರ ಪಾಲಿಕೆಯು (ಬಿಎಂಸಿ) ಐದು ತಾತ್ಕಾಲಿಕ ಆಶ್ರಯ ಕೇಂದ್ರಗಳನ್ನು ಸ್ಥಾಪಿಸಿದ್ದು, ಅಗತ್ಯವಿದ್ದಲ್ಲಿ ನಾಗರಿಕರು ಇಲ್ಲಿಗೆ ಸ್ಥಳಾಂತರವಾಗಬಹುದು ಎಂದು ತಿಳಿಸಿದೆ.
ವಿವಿಧ ಕೋವಿಡ್ ಕೇಂದ್ರಗಳ ಐಸಿಯುವಿನಲ್ಲಿದ್ದ 580 ರೋಗಿಗಳಲ್ಲಿ 500 ಕ್ಕೂ ಹೆಚ್ಚು ಮಂದಿಯನ್ನು ಇತರ ಕೋವಿಡ್ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಚಂಡಮಾರುತ ಹಿನ್ನೆಲೆಯಲ್ಲಿ ನಿನ್ನೆಯಿಂದ ಮುಂಬೈನಲ್ಲಿ ವ್ಯಾಕ್ಸಿನೇಷನ್ ಸ್ಥಗಿತಗೊಳಿಸಲಾಗಿದೆ.