ಅಹಮದಾಬಾದ್ (ಗುಜರಾತ್): ತೌಕ್ತೆ ಚಂಡಮಾರುತವು ದುರ್ಬಲಗೊಂಡಿದೆ. ದಕ್ಷಿಣ ರಾಜಸ್ಥಾನ, ಗುಜರಾತ್ ಪ್ರದೇಶವನ್ನು ಬುಧವಾರ ಬೆಳಗ್ಗೆ ಕೇಂದ್ರೀಕರಿಸಿದೆ ಎಂದು ಭಾರತ ಹವಾಮಾನ ಇಲಾಖೆ ತಿಳಿಸಿದೆ.
ಗುಜರಾತ್‌ನಲ್ಲಿ ವ್ಯಾಪಕ ಮಳೆಯಾದ ನಂತರ, ಚಂಡಮಾರುತದ ಪರಿಣಾಮ ರಾಜಸ್ಥಾನ, ಉತ್ತರಾಖಂಡ, ಹಿಮಾಚಲಪ್ರದೇಶ, ಉತ್ತರಪ್ರದೇಶ ಮತ್ತು ದೆಹಲಿ ಸೇರಿದಂತೆ ಇನ್ನೂ ಅನೇಕ ರಾಜ್ಯಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ.
ಚಂಡಮಾರುತ ಮುಂದಿನ ಎರಡು ದಿನಗಳಲ್ಲಿ ರಾಜಸ್ಥಾನದಾದ್ಯಂತ ಪಶ್ಚಿಮ ಉತ್ತರಪ್ರದೇಶಕ್ಕೆ ಮತ್ತಷ್ಟು ಈಶಾನ್ಯಕ್ಕೆ ಚಲಿಸುವ ಸಾಧ್ಯತೆಯಿದೆ. ಈ ದುರ್ಬಲತೆಯು ಪೂರ್ವ ರಾಜಸ್ಥಾನದ ಹೆಚ್ಚಿನ ಸ್ಥಳಗಳಲ್ಲಿ ಮಧ್ಯಮ ಮಳೆಗೆ ಕಾರಣವಾಗುತ್ತದೆ ಎಂದು ಐಎಂಡಿ ತಿಳಿಸಿದೆ.
ಉತ್ತರಾಖಂಡದಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಮುಂದಿನ 24 ಗಂಟೆಗಳಲ್ಲಿ ಹಿಮಾಚಲ ಪ್ರದೇಶ, ಹರಿಯಾಣ, ಚಂಡೀಗಢ, ದೆಹಲಿ, ಪಶ್ಚಿಮ ಉತ್ತರಪ್ರದೇಶ ಮತ್ತು ಪಶ್ಚಿಮ ರಾಜಸ್ಥಾನದ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುತ್ತದೆ.
ಮುಂದಿನ 12 ಗಂಟೆಗಳಲ್ಲಿ ಪೂರ್ವ ರಾಜಸ್ಥಾನ ಮತ್ತು ಗುಜರಾತ್ ಪ್ರದೇಶದಲ್ಲಿ 45-55 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹೇಳಿದೆ.
ಗುಜರಾತ್ ಮೂಲಕ ಚಂಡಮಾರುತವು ಹಾದುಹೋಗುವಾಗ, ಸುಮಾರು 13 ಜನರನ್ನು ಬಲಿ ಪಡೆದಿದ್ದು, ಸಾವಿರಾರು ಮರಗಳು ಧರೆಗುರುಳಿವೆ. ಹಲವಾರು ಮನೆಗಳು ನಾಶವಾದವು ಮತ್ತು ವಿದ್ಯುತ್ ಕಂಬಗಳು ಹಾನಿಗೊಳಗಾದವು.
ಖೇಡಾ, ಮಧ್ಯ ಗುಜರಾತ್‌ನ ಆನಂದ್, ಸೂರತ್, ದಕ್ಷಿಣ ಗುಜರಾತ್‌ನ ನವಸಾರಿ ಮತ್ತು ಗಿರ್ ಸೋಮನಾಥ್, ಭಾವನಗರ ಮತ್ತು ಸಬರ್ಕಂತ ಜಿಲ್ಲೆಗಳಲ್ಲಿ ಬುಧವಾರ ಬೆಳಗ್ಗೆ 6 ಗಂಟೆಯವರೆಗೆ 24 ಗಂಟೆಗಳಲ್ಲಿ 100 ಮಿ.ಮೀ ಮಳೆಯಾಗಿದೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ತಿಳಿಸಿದೆ.
ಖೇಡಾದ ನಾಡಿಯಾಡ್ ಈ ಅವಧಿಯಲ್ಲಿ ಅತಿ ಹೆಚ್ಚು 226 ಮಿ.ಮೀ ಮಳೆಯಾಗಿದೆ. ನಂತರ ಗಿರ್ ಸೋಮನಾಥ್ ಜಿಲ್ಲೆಯ ಗಿರ್ ಗಡಾಡಾ ಮತ್ತು ಉನಾ ಕ್ರಮವಾಗಿ 185 ಮಿ.ಮೀ ಮತ್ತು 177 ಮಿ.ಮೀ ಮಳೆಯಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯ ಸರ್ಕಾರ ಎರಡು ಲಕ್ಷ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದೆ.