ಚೆನ್ನೈ (ತಮಿಳುನಾಡು): ಭಾನುವಾರ ಮಧ್ಯರಾತ್ರಿಯಿಂದ ಚೆನ್ನೈ, ತಿರುವಳ್ಳೂರು, ಕಾಂಚೀಪುರಂ ಮತ್ತು ಚೆಂಗಲ್ಪಟ್ಟುಗಳಲ್ಲಿ ಭಾರಿ ಮಳೆಯಾಗುತ್ತಿದೆ. ಇದರಿಂದಾಗಿ ಹಲವು ಪ್ರದೇಶಗಳು ಜಲಾವೃತವಾಗಿವೆ. ಭಾರಿ ಮಳೆಯಿಂದಾಗಿ ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಆದರೆ, ಸೋಮವಾರ ತಡರಾತ್ರಯಿಂದ ಮಳೆಯ ಅಬ್ಬರ ತುಸು ಕಡಿಮೆ ಆಗಿದ್ದು, ಜನ ಸ್ಪಲ್ಪ ನಿಟ್ಟುಸಿರು ಬಿಡುವಂತೆ ಮಾಡಿದೆ.
ಭಾರಿ ಮಳೆಯಿಂದಾಗಿ ಚೆಂಬರಂಬಾಕ್ಕಂ, ಪುಝಲ್ ಮತ್ತು ಪೂಂಡಿಯಲ್ಲಿ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಇತರ ಸ್ವಯಂಸೇವಕರು ಜನ ಜೀವನ ಸಹಜ ಸ್ಥಿತಿಗೆ ಮರಳುವಂತೆ ಮಾಡಲು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಸಂಕಷ್ಟದಲ್ಲಿದ್ದವರ ರಕ್ಷಣೆಯನ್ನ ತ್ವರಿತವಾಗಿ ಮಾಡಲಾಗುತ್ತಿದೆ. ಇದೇ ವೇಳೆ, ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪೂರ್ಣ ಜಲಾವೃತವಾಗಿತ್ತು. ಅಲ್ಲಿ ಸಹ ನೀರು ಹೊರ ಹಾಕುವ ಕೆಲಸವನ್ನು ರಕ್ಷಣಾ ಪಡೆಗಳು ಮಾಡುತ್ತಿವೆ.
ಸೋಮವಾರ ಮಧ್ಯರಾತ್ರಿಯಿಂದ ಚೆನ್ನೈ ಸೇರಿದಂತೆ ಇತರ ನೆರೆಯ ಜಿಲ್ಲೆಗಳಲ್ಲಿ ಮಳೆ ನಿಧಾನವಾಗಿ ಕಡಿಮೆಯಾಗಿದೆ. ಆದರೂ ಚೆನ್ನೈ ಮಹಾನಗರದ ಜನರ ಜೀವನ ಸಾಮಾನ್ಯ ಸ್ಥಿತಿಗೆ ಮರಳಿಲ್ಲ. ಸಾಮಾನ್ಯ ಸಾರಿಗೆ ಸಂಚಾರ ಎಂದಿನಂತೆ ಸುಗಮಗೊಳಿಸಲು ಸಾಧ್ಯವಾಗುತ್ತಿಲ್ಲ. ಚೆನ್ನೈ ಸ್ಥಳೀಯ ಮತ್ತು ಉಪನಗರ ವಿದ್ಯುತ್ ರೈಲುಗಳ ಓಡಾಟ ಇನ್ನೂ ಆರಂಭವಾಗಿಲ್ಲ. ತಮಿಳುನಾಡಿನ ಇತರ ಜಿಲ್ಲೆಗಳಿಂದ 5,000 ಕ್ಕೂ ಹೆಚ್ಚು ಕಾರ್ಮಿಕರನ್ನು ಚೆನ್ನೈಗೆ ಕರೆಸಲಾಗಿದ್ದು, ಜನಜೀವನ ಸುಗಮಗೊಳಿಸಲು ಭಾರಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಸುಮಾರು 8,000 ಲೈನ್ಮನ್ಗಳು ವಿದ್ಯುತ್ ಮರುಸ್ಥಾಪನೆ ಕೆಲಸ ಮಾಡುತ್ತಿದ್ದಾರೆ.