ಅಮರಾವತಿ (ಆಂಧ್ರಪ್ರದೇಶ):ಬಂಗಾಳಕೊಲ್ಲಿಯಲ್ಲಿ ಕಾಣಿಸಿಕೊಂಡಿರುವ ಜವಾದ್ ಚಂಡಮಾರುತ ಶನಿವಾರ ಬೆಳಿಗ್ಗೆ ಆಂಧ್ರಪ್ರದೇಶ, ಒಡಿಶಾದ ಕರಾವಳಿ ತೀರ ಪ್ರದೇಶಕ್ಕೆ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಜವಾದ್ ಚಂಡಮಾರುತ ಎಚ್ಚರಿಕೆ ಹಿನ್ನೆಲೆ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯಿಂದ 15,755 ಜನರನ್ನು, ವಿಶಾಖಪಟ್ಟಣ ಜಿಲ್ಲೆಯಿಂದ 36,553 ಜನರನ್ನು ಹಾಗೂ ವಿಜಯನಗರಂ ಜಿಲ್ಲೆಯಿಂದ 1700 ಸೇರಿ ಒಟ್ಟು 54008 ಜನರನ್ನು ರಕ್ಷಣಾ ಪಡೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದೆ.
ಈ ಮೂರು ಜಿಲ್ಲೆಗಳಲ್ಲಿ ಸಂತ್ರಸ್ತರಿಗಾಗಿ ಸರ್ಕಾರ ಶಾಲೆ ಹಾಗೂ ಸಮುದಾಯ ಕೇಂದ್ರಗಳಲ್ಲಿ 197 ಶಿಬಿರಗಳನ್ನು ತೆರೆದಿದೆ. ಎನ್ಡಿಆರ್ಎಫ್, ಎಸ್ಡಿಆರ್ಎಫ್ ತಂಡಗಳನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ.
ಆಂಧ್ರಪ್ರದೇಶದ ಉತ್ತರ ಕರಾವಳಿ ಮತ್ತು ಒಡಿಶಾದ ದಕ್ಷಿಣ ಕರಾವಳಿ ಭಾಗದಲ್ಲಿ ಧಾರಾಕಾರವಾಗಿ ಮಳೆಯಾಗಲಿದೆ. ಶನಿವಾರ ಮಳೆಯ ತೀವ್ರತೆಯೂ ಹೆಚ್ಚಿರಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.
(ಇದನ್ನೂ ಓದಿ: ಆಂಧ್ರದಲ್ಲಿ ವರುಣಾರ್ಭಟ: ಚಿತ್ರಾವತಿ ನದಿಯಲ್ಲಿ ಸಿಲುಕಿದ್ದ 11 ಜನರ ರಕ್ಷಿಸಿದ ವಾಯುಪಡೆ)