ಹೈದರಾಬಾದ್: ಆಂಧ್ರಪ್ರದೇಶ, ಒಡಿಶಾ, ಮಹಾರಾಷ್ಟ್ರ, ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಗುಲಾಬ್ ಚಂಡಮಾರುತ ಅಬ್ಬರಿಸಿದೆ. ಇಲ್ಲಿಯವರೆಗೆ ಒಟ್ಟು 25 ಜನರು ಬಲಿಯಾಗಿದ್ದಾರೆಂದು ತಿಳಿದು ಬಂದಿದೆ.
ಗುಲಾಬ್ ಅಬ್ಬರದಿಂದಾಗಿ ದೇಶದ ವಿವಿಧ ರಾಜ್ಯಗಳಲ್ಲಿ ನಿರಂತರವಾಗಿ ಮಳೆ ಸುರಿದು, ಪ್ರವಾಹ ಭೀತಿ ಎದುರಾಗಿದೆ. ಸಾವಿರಾರು ಜನರು ತೊಂದರೆಗೊಳಗಾಗಿದ್ದಾರೆ. ಪ್ರಮುಖವಾಗಿ ಮಹಾರಾಷ್ಟ್ರದ ಅನೇಕ ಪ್ರದೇಶಗಳಲ್ಲಿ ನೆರೆ ಪರಿಸ್ಥಿತಿ ನಿರ್ಮಾಣವಾಗಿದ್ದು, 17ಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದರ ಜೊತೆಗೆ 206ಕ್ಕೂ ಅಧಿಕ ಜಾನುವಾರು ಕೊಚ್ಚಿಕೊಂಡು ಹೋಗಿವೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಮಂಡಳಿ ಮಾಹಿತಿ ನೀಡಿದೆ.
ಮಹಾರಾಷ್ಟ್ರದ ವಿವಿಧ ಪ್ರದೇಶಗಳಲ್ಲಿ ಚಂಡಮಾರುತದ ವೇಳೆ ಸಿಡಿಲಿನ ಅಬ್ಬರಕ್ಕೆ 13 ಜನರು ಬಲಿಯಾಗಿದ್ದಾಗಿ ವರದಿಯಾಗಿದೆ. ಉಳಿದಂತೆ ಆಂಧ್ರಪ್ರದೇಶದಲ್ಲಿ ಇಬ್ಬರು ಮೀನುಗಾರರು, ತೆಲಂಗಾಣದಲ್ಲಿ ಓರ್ವ ಪ್ರಾಣ ಕಳೆದುಕೊಂಡಿದ್ದಾನೆ.