ತಿರುವನಂತಪುರಂ (ಕೇರಳ):ಬುರೆವಿ ಚಂಡಮಾರುತ ಅಪ್ಪಳಿಸುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ರಕ್ಷಣಾ ಕಾರ್ಯಾಚರಣೆ ಬಗ್ಗೆ ಕೋಸ್ಟ್ ಗಾರ್ಡ್, ಎನ್ಡಿಆರ್ಎಫ್, ವಿವಿಧ ವಿಭಾಗದ ಮುಖ್ಯಸ್ಥರು, ಡಿಜಿಪಿ ಮತ್ತು ಮುಖ್ಯ ಕಾರ್ಯದರ್ಶಿ ಜೊತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಭೆ ನಡೆಸಿದ್ದಾರೆ.
"ಐಎಂಡಿ ಎಚ್ಚರಿಕೆ ನಂತರ, ಮೀನುಗಾರಿಕೆಗೆ ಸಂಪೂರ್ಣ ನಿಷೇಧ ಸೇರಿದಂತೆ ಎಲ್ಲಾ ಅಗತ್ಯ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಾಗಿದೆ. 2,891 ಪರಿಹಾರ ಶಿಬಿರಗಳನ್ನು ತೆರೆಯಲಾಗಿದೆ. ಸಹಾಯವಾಣಿ ಸಂಖ್ಯೆಗಳೊಂದಿಗೆ 24 ಗಂಟೆಗಳ ನಿಯಂತ್ರಣ ಕೊಠಡಿಯನ್ನು ಪ್ರಾರಂಭಿಸಲಾಗಿದೆ" ಎಂದು ಪಿಣರಾಯಿ ವಿಜಯನ್ ಮಾಹಿತಿ ನೀಡಿದ್ದಾರೆ.
ಚಂಡಮಾರುತ ಹಿನ್ನೆಲೆಯಲ್ಲಿ ತಿರುವನಂತಪುರಂ, ಕೊಲ್ಲಂ, ಪಥನಮತ್ತಟ್ಟ, ಆಲಪ್ಪುಳ ಮತ್ತು ಇಡುಕ್ಕಿ ಜಿಲ್ಲೆಗಳೆಲ್ಲಿ ಸಾರ್ವಜನಿಕ ರಜೆ ಘೋಷಿಸಲಾಗಿದೆ. ಅಲ್ಲದೆ ಮಧುರೈ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟವನ್ನು ನಾಳೆ ಮಧ್ಯಾಹ್ನ 12 ರವರೆಗೆ ಸ್ಥಗಿತಗೊಳಿಸಲಾಗಿದ್ದು, ಟ್ಯುಟಿಕೋರಿನ್ ವಿಮಾನ ನಿಲ್ದಾಣವನ್ನು ಇಂದು ಮುಚ್ಚಲಾಗುವುದು.
ಬುರೆವಿ ಚಂಡಮಾರುತ ಪಂಬನ್ ಪ್ರದೇಶದ ಉದ್ದಕ್ಕೂ ಪಶ್ಚಿಮ ದಿಕ್ಕಿಗೆ ಚಲಿಸಲಿದ್ದು, ನಂತರ ಪಶ್ಚಿಮ-ನೈಋತ್ಯ ದಿಕ್ಕಿನಲ್ಲಿ ಚಲಿಸುತ್ತದೆ. ಡಿಸೆಂಬರ್ 3 ರಾತ್ರಿ ಮತ್ತು ಡಿಸೆಂಬರ್ 4ರ ಮುಂಜಾನೆ ಪಂಬನ್ ಮತ್ತು ಕನ್ಯಾಕುಮಾರಿ ನಡುವೆ ದಕ್ಷಿಣ ತಮಿಳುನಾಡು ಕರಾವಳಿಯನ್ನು ದಾಟಲಿದೆ. ಸುಮಾರು 70 ರಿಂದ 90 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.