ಕರ್ನಾಟಕ

karnataka

ETV Bharat / bharat

Biparjoy cyclone: ಬಿಪೊರ್‌ಜಾಯ್‌ ಚಂಡಮಾರುತ ತೀವ್ರ, ಉತ್ತರ ದಿಕ್ಕಿನತ್ತ ಸಂಚಾರ; ಮುಂದಿನ 6 ಗಂಟೆ ಗುಡುಗು ಸಹಿತ ಮಳೆ ಸಾಧ್ಯತೆ - ಬಿಪರ್‌ಜಾಯ್‌

ತೀವ್ರಗೊಂಡಿರುವ ಬಿಪೊರ್‌ಜಾಯ್‌ ಚಂಡಮಾರುತ ಪೂರ್ವ ಕೇಂದ್ರ ಅರಬ್ಬಿ ಸಮುದ್ರ ಭಾಗದಲ್ಲಿ ನೆಲೆಗೊಂಡು ಉತ್ತರದ ಕಡೆಗೆ ಚಲಿಸುತ್ತಿದೆ. ಗಂಟೆಗೆ 5 ಕಿ.ಮೀ ವೇಗದಲ್ಲಿ ಸಂಚರಿಸುತ್ತಿದೆ. ಮುಂದಿನ 6 ಗಂಟೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Representative Image
ಪ್ರಾತಿನಿದಿಕ ಚಿತ್ರ

By

Published : Jun 11, 2023, 9:39 AM IST

ನವದೆಹಲಿ: ಪೂರ್ವ-ಮಧ್ಯ ಅರಬ್ಬಿ ಸಮುದ್ರದ ಮೇಲೆ ಸೃಷ್ಟಿಯಾಗಿರುವ ಅತ್ಯಂತ ತೀವ್ರವಾದ ಚಂಡಮಾರುತ 'ಬಿಪೊರ್‌ಜಾಯ್‌' ಗಂಟೆಗೆ 5 ಕಿ.ಮೀ ವೇಗದಲ್ಲಿ ದೇಶದ ಉತ್ತರದ ಕಡೆಗೆ ಚಲಿಸುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಭಾನುವಾರ ತಿಳಿಸಿದೆ. ಮುಂದಿನ 6 ಗಂಟೆಗಳ ಅವಧಿಯಲ್ಲಿ ಚಂಡಮಾರುತದ ಆರ್ಭಟ ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ.

ಐಎಂಡಿ ಪ್ರಕಾರ, ಜೂನ್ 15 ರಂದು ಅತ್ಯಂತ ತೀವ್ರ ಸ್ವರೂಪದ ಚಂಡಮಾರುತವಾಗಿ ಗುಜರಾತ್‌ನ ಸೌರಾಷ್ಟ್ರ ಮತ್ತು ಕಚ್ ಕರಾವಳಿ ತಲುಪುವ ಸಾಧ್ಯತೆ ಇದೆ ಎಂದು ಹೇಳಿದೆ. ಅರಬ್ಬಿ ಸಮುದ್ರದ ಕರಾವಳಿಯುದ್ದಕ್ಕೂ ಆತಂಕ ಸೃಷ್ಟಿಸಿದ ಬಿಪೊರ್‌ಜಾಯ್‌ ಭಾನುವಾರ ಪಾಕಿಸ್ತಾನದತ್ತ ಸಂಚರಿಸುತ್ತಿದೆ. ಇನ್ನು, ಕರ್ನಾಟಕದ ಕರಾವಳಿ ಭಾಗದಲ್ಲಿ ಇದರ ಪ್ರಭಾವ ತಗ್ಗಿದರೂ ಕೂಡ ಮೋಡ ಕವಿದ ವಾತಾವರಣವಿದೆ ಎಂದು ಇಲಾಖೆ ಬಿಡುಗಡೆ ಮಾಡಿರುವ ಬುಲೆಟಿನ್‌ನಲ್ಲಿ ತಿಳಿಸಿದೆ.

ಪ್ರಸ್ತುತ, ಚಂಡಮಾರುತ ಮುಂಬೈನ ಪಶ್ಚಿಮ-ನೈಋತ್ಯಕ್ಕೆ 620 ಕಿ.ಮೀ, ಪೋರಬಂದರ್‌ನಿಂದ 580 ಕಿ.ಮೀ ದಕ್ಷಿಣ-ನೈಋತ್ಯ ಮತ್ತು ಕರಾಚಿಯಿಂದ 890 ಕಿಮೀ ದಕ್ಷಿಣದಲ್ಲಿ ಕೇಂದ್ರೀಕೃತವಾಗಿದೆ. ಸಮುದ್ರದ ಪರಿಸ್ಥಿತಿ ಇಂದು ಪ್ರಕ್ಷುಬ್ಧವಾಗಿರಬಹುದು. ಜೂನ್ 11 ರಿಂದ 15 ರವರೆಗೆ ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದೆ.

ಮೀನುಗಾರರಿಗೆ ಎಚ್ಚರಿಕೆ:ಚಂಡಮಾರುತ ಹಿನ್ನೆಲೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡ ಗುಜರಾತ್‌ನ ವಡೋದರದ ಜರೋಡ್ ಗ್ರಾಮದ ಬಳಿಯ ಬೀಚ್‌ನಲ್ಲಿ ಬೀಡುಬಿಟ್ಟಿದೆ. ಜೂನ್ 14 ರವರೆಗೆ ಬೀಚ್​ಗೆ ಪ್ರವಾಸಿಗರಿಗೆ ನಿಷೇಧ ವಿಧಿಸಲಾಗಿದೆ. ಚಂಡಮಾರುತವು ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದ ಕರಾವಳಿ ಪ್ರದೇಶಗಳಲ್ಲಿ ಭಾರಿ ಮಳೆ ಮತ್ತು ಗಾಳಿ ಉಂಟು ಮಾಡಬಹುದು ಎಂದು ಐಎಂಡಿ ಎಚ್ಚರಿಕೆ ನೀಡಿದೆ. ಈ ಮಧ್ಯೆ, ಗುಜರಾತ್, ಕೇರಳ, ಕರ್ನಾಟಕ ಮತ್ತು ಲಕ್ಷದ್ವೀಪ ಕರಾವಳಿಯ ಸಮುದ್ರಕ್ಕೆ ಹೋಗದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.

ಪಾಕಿಸ್ತಾನದಲ್ಲಿ ಅನಾಹುತ:ಈ ನಡುವೆ ಭಾರಿ ಮಳೆಗೆ ಪಾಕಿಸ್ತಾನದಲ್ಲಿ ಅನಾಹುತ ಸಂಭವಿಸಿವೆ. ದೇಶದ ವಿವಿಧೆಡೆ 28 ಜನರು ಮೃತಪಟ್ಟು 140ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಮಳೆಯಿಂದ ಕನಿಷ್ಠ 69 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಮುಖ್ಯವಾಗಿ ಪಂಜಾಬ್‌ ಮತ್ತು ಖೈಬರ್‌ ಪಖ್ತುಂಕ್ವ ಪ್ರದೇಶದಲ್ಲಿ ಹಾನಿಯುಂಟಾಗಿದೆ ಎಂದು ವರದಿಯಾಗಿದೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಡೆಪ್ಯೂಟಿ ಸ್ಪೀಕರ್ ನ್ಯಾಶನಲ್ ಅಸೆಂಬ್ಲಿ ಜಾಹಿದ್ ಅಕ್ರಮ್ ದುರಾನಿ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು. ಮಳೆ ಸಂಬಂಧಿತ ಘಟನೆಗಳಲ್ಲಿ ಜೀವ ಮತ್ತು ಆಸ್ತಿ ನಷ್ಟದ ಬಗ್ಗೆ ಅವರು ವಿಷಾದ ವ್ಯಕ್ತಪಡಿಸಿದರು. "ಯಾವುದೇ ಅಹಿತಕರ ಪರಿಸ್ಥಿತಿಯನ್ನು ಎದುರಿಸಲು ತುರ್ತು ಕ್ರಮಗಳನ್ನು ತೆಗೆದುಕೊಳ್ಳುವಂತೆ" ಅವರು ಖೈಬರ್ ಪಖ್ತುಂಖ್ವಾ ಮುಖ್ಯ ಕಾರ್ಯದರ್ಶಿ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ (ಎನ್‌ಡಿಎಂಎ) ಸೂಚನೆ ನೀಡಿದರು.

ನಿನ್ನೆ ಕರ್ನಾಟಕ ಪ್ರವೇಶ:ಕಳೆದಗುರುವಾರ ಅಧಿಕೃತವಾಗಿ ಕೇರಳಕ್ಕೆ ಆಗಮಿಸಿದ ಮುಂಗಾರು 2 ದಿನಗಳ ಬಳಿಕ ರಾಜ್ಯಕ್ಕೆ (ಶನಿವಾರ) ಪ್ರವೇಶಿಸಿದೆ. ಈಗಾಗಲೇ ಮಡಿಕೇರಿ ಹಾಗೂ ಕಾರವಾರದವೆರೆಗೆ ವ್ಯಾಪಿಸಿದ ಮುಂಗಾರು ಇನ್ನೆರಡು ದಿನಗಳಲ್ಲಿ ರಾಜ್ಯದ ಹಲವು ಭಾಗಗಳಿಗೆ ವ್ಯಾಪಿಸಲಿದೆ ಎಂದು ಐಎಂಡಿ ಹೇಳಿದೆ. ಮಾನ್ಸೂನ್​ ಪ್ರವೇಶ ಹಿನ್ನೆಲೆಯಲ್ಲಿ ಮುಂದಿನ 5 ದಿನಗಳ ಕಾಲ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಹಾಗಾಗಿ ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

ಮಹಾರಾಷ್ಟ್ರ, ಗೋವಾ, ಕೇರಳ ಹಾಗೂ ಗುಜರಾತ್​ ಕರಾವಳಿಯುದ್ದಕ್ಕೂ ಬಿಪೊರ್‌ಜಾಯ್‌ ಚಂಡಮಾರುತದ ಪ್ರಭಾವ ಕೆಲ ದಿನಗಳಿಂದ ಇದ್ದು ಅಲ್ಲಲ್ಲಿ ಮಳೆಯಾಗುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಹಲವು ಕಡೆ ಬೀಚ್‌ಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ ವಿಧಿಸಲಾಗಿದೆ. ಹೇರಲಾಗಿದೆ. ಮೀನುಗಾರರಿಗೂ ಸೂಚನೆ ನೀಡಲಾಗಿದ್ದು, ಕರಾವಳಿ ಪಡೆ ಗಸ್ತಿನಲ್ಲಿ ನಿರತವಾಗಿವೆ.

ಇದನ್ನೂ ಓದಿ:ವಾಯುಭಾರ ಕುಸಿತ, ಬೈಪರ್​ಜಾಯ್​ ಚಂಡಮಾರುತದ ಭೀತಿ: ಕರ್ನಾಟಕ ಸೇರಿ ನಾಲ್ಕು ರಾಜ್ಯದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ!

ABOUT THE AUTHOR

...view details