ಅಹಮದಾಬಾದ್:ಗುಜರಾತ್‌ಗೆ ಇಂದು ಬಿಪರ್‌ಜೋಯ್ ಚಂಡಮಾರುತ ಅಪ್ಪಳಿಸಲಿದೆ. ಸಂಜೆ 4 ರಿಂದ ರಾತ್ರಿ 8 ರ ನಡುವೆ ಸೈಕ್ಲೋನ್ ಅಪ್ಪಳಿಸುವುದರಿಂದ ಗುಜರಾತ್ ಕರಾವಳಿಯಲ್ಲಿ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಬೃಹತ್ ತೆರವು ಕಾರ್ಯಾಚರಣೆ ಮತ್ತು ವಿಪತ್ತು ನಿರ್ವಹಣಾ ಸಿಬ್ಬಂದಿಯನ್ನು ಗುಜರಾತ್ ಸರ್ಕಾರ ನಿಯೋಜಿಸಿದೆ.
ಚಂಡಮಾರುತ ಸಂಜೆ 5.30 ರ ಹೊತ್ತಿಗೆ ಭಾರಿ ಭೂಕುಸಿತವನ್ನುಂಟು ಮಾಡುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಧ್ಯಾಹ್ನ 2.30 ಗಂಟೆಗೆ ಬಿಪರ್‌ಜೋಯ್ ಜಖೌ ಬಂದರಿನ (ಗುಜರಾತ್) ಪಶ್ಚಿಮ-ನೈಋತ್ಯಕ್ಕೆ 200 ಕಿಮೀ ದೂರದಲ್ಲಿ ಕೇಂದ್ರೀಕೃತವಾಗಿದೆ ಎಂದು ಹವಾಮಾನ ಇಲಾಖೆಯ ಬುಲೆಟಿನ್ನಲ್ಲಿ ಹೇಳಿದೆ.
ಗುಜರಾತ್ ರಾಜ್ಯ ಸರ್ಕಾರವು ಕರಾವಳಿಯ ಎಂಟು ಜಿಲ್ಲೆಗಳ 74,000 ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ ಎಂದು ಸಿಎಂ ಕಚೇರಿ ಹೇಳಿಕೆಯಲ್ಲಿ ತಿಳಿಸಲಾಗಿದೆ. ಚಂಡಮಾರುತವು ಕಚ್ ಜಿಲ್ಲೆಯ ಜಖೌ ಬಂದರಿನ ಬಳಿ ಭೂಕುಸಿತವನ್ನು ಉಂಟುಮಾಡುವ ನಿರೀಕ್ಷೆಯಿದೆ. ಈಗಾಗಲೇ ಸೌರಾಷ್ಟ್ರ-ಕಚ್ ಪ್ರದೇಶದ ಕೆಲವು ಭಾಗಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ. ಭಾರಿ ಪ್ರಮಾಣದಲ್ಲಿ ಬೀಸುತ್ತಿರುವ ಗಾಳಿ ಅಪಾರ ಹಾನಿಯನ್ನುಂಟು ಮಾಡುತ್ತಿದೆ. ಗುಜರಾತ್, ಕೇರಳ, ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ, ರಾಜಸ್ಥಾನ, ಮಧ್ಯಪ್ರದೇಶ, ಗೋವಾ, ದಮನ್ ದಿಯು, ಲಕ್ಷದ್ವೀಪ, ದಾದರ್ ಮತ್ತು ನಾಗರಾಜುನ್ ಹವೇಲಿಗೆ ಹವಾಮಾನ ಇಲಾಖೆ ಈಗಾಗಲೇ ಮುನ್ನೆಚ್ಚರಿಕೆ ರವಾನಿಸಿದ್ದು, ಚಂಡಮಾರುತದಿಂದ ರಕ್ಷಿಸಿಕೊಳ್ಳಲು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಕರಾವಳಿ ತೀರದಲ್ಲಿರುವ ಜನರಿಗೆ ಎಚ್ಚರಿಕೆ ನೀಡಿದೆ.
ಧಾರಾಕಾರ ಮಳೆ:ಬಿಪರ್‌ಜೋಯ್ ಚಂಡಮಾರುತ ಗುಜರಾತ್‌ನ ಕರಾವಳಿ ಪ್ರದೇಶಗಳಲ್ಲಿ ಬುಧವಾರ ಭಾರಿ ಮಳೆಗೆ ಕಾರಣವಾಗಿದೆ. ಇಂದು ಕಚ್, ದೇವಭೂಮಿ ದ್ವಾರಕಾ ಮತ್ತು ಜಾಮ್‌ನಗರದ ಕೆಲವು ಸ್ಥಳಗಳಲ್ಲಿ ಭಾರೀ ಮತ್ತು ಅತಿ ಹೆಚ್ಚು ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಭಾರತೀಯ ನೌಕಾಪಡೆ ಹಡಗುಗಳನ್ನ ಸಿದ್ಧವಾಗಿ ಇಡಲಾಗಿದೆ. ಭಾರತೀಯ ನೌಕಾಪಡೆಯು ಇದಕ್ಕಾಗಿ ಸುಸಜ್ಜಿತ ನಾಲ್ಕು ಹಡಗುಗಳನ್ನು ಸನ್ನದ್ದಗೊಳಿಸಿದೆ. ಪೋರಬಂದರ್ ಮತ್ತು ಓಖಾ ಎರಡರಲ್ಲೂ ಐದು ಪರಿಹಾರ ತಂಡಗಳನ್ನು ನಿಯೋಜಿಸಲಾಗಿದೆ. ಜೊತೆಗೆ 15 ಪರಿಹಾರ ತಂಡಗಳು ಅಧಿಕಾರಿಗಳಿಗೆ ನೆರವು ಮತ್ತು ಬೆಂಬಲ ಒದಗಿಸಲು ಸಿದ್ಧವಾಗಿವೆ. ಇದಲ್ಲದೇ ಗೋವಾದ INS ಹಂಸಾ ಮತ್ತು ಮುಂಬೈನ INS ಶಿಕ್ರಾದಲ್ಲಿ ನೆಲೆಸಿರುವ ಹೆಲಿಕಾಪ್ಟರ್‌ಗಳು ಗುಜರಾತ್‌ಗೆ ತಕ್ಷಣದ ನೆರವು ನೀಡಲು ಸಜ್ಜುಗೊಂಡಿವೆ.
ಭೂ ಕುಸಿತವನ್ನುಂಟು ಮಾಡುವ ಸಾಧ್ಯತೆ:ಬಿಪರ್‌ಜೋಯ್ ತನ್ನ ಪಥ ಬದಲಿಸಿ ಈಶಾನ್ಯಕ್ಕೆ ಕಚ್ ಮತ್ತು ಸೌರಾಷ್ಟ್ರ ಕಡೆಗೆ ಚಲಿಸುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಭವಿಷ್ಯ ನುಡಿದಿದೆ. ಇದು ಅತ್ಯಂತ ತೀವ್ರವಾದ ಚಂಡಮಾರುತವಾಗಿದ್ದು, ಭೂಕುಸಿತವನ್ನು ಉಂಟುಮಾಡುವ ನಿರೀಕ್ಷೆಯಿದೆ. ಗಂಟೆಗೆ 125-135 ಕಿಮೀ ಮತ್ತು 145 ಕಿಮೀ ವರೆಗೆ ಗಾಳಿ ಬೀಸುತ್ತದೆ. ಹೀಗಾಗಿ ಗುಜರಾತ್ ಸರ್ಕಾರವು ಕಚ್ ಪ್ರದೇಶದ ಮೇಲೆ ಗಮನ ಕೇಂದ್ರೀಕರಿಸಿದೆ.
ರಾಜ್ಯ ಪರಿಹಾರ ಆಯುಕ್ತ ಅಲೋಕ್ ಕುಮಾರ್ ಪಾಂಡೆ ಈ ಬಗ್ಗೆ ಮಾತನಾಡಿದ್ದು, "ಚಂಡಮಾರುತವು ಪ್ರಸ್ತುತ ಕಚ್‌ನಿಂದ ಸುಮಾರು 290 ಕಿಮೀ ದೂರದಲ್ಲಿದೆ. ಮುನ್ನೆಚ್ಚರಿಕೆ ಕ್ರಮವಾಗಿ, ನಾವು ಈಗಾಗಲೇ ಕರಾವಳಿಯಲ್ಲಿ ವಾಸಿಸುವ ಸುಮಾರು 50,000 ಜನರನ್ನು ಸ್ಥಳಾಂತರಿಸಿದ್ದೇವೆ. ಪ್ರದೇಶಗಳನ್ನು ತಾತ್ಕಾಲಿಕ ಆಶ್ರಯಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆ ಇನ್ನೂ ಮುಂದುವರೆದಿದೆ ಮತ್ತು ಉಳಿದ 5,000 ವ್ಯಕ್ತಿಗಳನ್ನು ತಡರಾತ್ರಿಯ ವೇಳೆಗೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುವುದು‘‘ ಎಂದು ತಿಳಿಸಿದ್ದಾರೆ
ಸುಮಾರು 18,000 ವ್ಯಕ್ತಿಗಳನ್ನು ಕಚ್ ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ ಆಶ್ರಯ ಕೇಂದ್ರಗಳಿಗೆ ವರ್ಗಾಯಿಸಲಾಗಿದೆ, ಉಳಿದವರನ್ನು ಜುನಾಗಢ್, ಜಾಮ್‌ನಗರ, ಪೋರಬಂದರ್, ದೇವಭೂಮಿ ದ್ವಾರಕಾ, ಮೋರ್ಬಿ ಮತ್ತು ರಾಜ್‌ಕೋಟ್‌ನಿಂದ ಸ್ಥಳಾಂತರಿಸಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಮತ್ತು ವಿವಿಧ ಸರ್ಕಾರಿ ಇಲಾಖೆಗಳು ಸೇರಿದಂತೆ ಹಲವು ತಂಡಗಳನ್ನು ವಿವಿಧ ಕರಾವಳಿ ಜಿಲ್ಲೆಗಳಲ್ಲಿ ಪರಿಹಾರ ಮತ್ತು ಬೆಂಬಲ ನೀಡಲು ನಿಯೋಜಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನು ಓದಿ:Biparjoy ಚಂಡಮಾರುತ: ಗುಜರಾತ್ ಕರಾವಳಿ ಪ್ರದೇಶದ 30 ಸಾವಿರ ಜನರ ಸ್ಥಳಾಂತರ