ಗುಜರಾತ್:ಬಿಪೊರ್ ಜೋಯ್ ಚಂಡಮಾರುತ ತೀವ್ರ ಸ್ವರೂಪ ಪಡೆದಿದ್ದು, ಪ್ರತಿ ಗಂಟೆಗೆ 150 ಕಿ.ಮೀ ವೇಗದಲ್ಲಿ ಗಾಳಿಯೊಂದಿಗೆ ಬೀಸುತ್ತಿದೆ. ಗುಜರಾತ್‌ನ ಅರಾವಳಿ ಜಿಲ್ಲೆಯ ಹಲವು ಭಾಗಗಳಲ್ಲಿ ಭಾರಿ ಮಳೆಯಾಗುತ್ತಿದೆ. ಕಛ್, ಪೋರ್ಬಂದರ್, ದೇವಭೂಮಿ ದ್ವಾರಕಾ, ಜುನಾಗಢ ಹಾಗೂ ಮೋರ್ಬಿ ಕರಾವಳಿಯಲ್ಲಿ ಅಪಾಯ ಸೃಷ್ಟಿಸುವ ಭೀತಿ ಎದುರಾಗಿದೆ. ಈ ಭಾಗದ ಜನರನ್ನು ಸ್ಥಳಾಂತರಿಸುವ ಕಾರ್ಯಾಚರಣೆ ಶುರುವಾಗಿದೆ. ಕಛ್ನ ಕಾಂಡ್ಲಾ ಬಂದರಿನಲ್ಲಿ ಎಲ್ಲ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಜಾಗ್ರತೆವಹಿಸಲಾಗಿದೆ.
ಕಾಂಡ್ಲಾಗೆ ಡಾ.ಮನ್ಸುಖ್ ಮಾಂಡವಿಯಾ ಭೇಟಿ ಪರಿಶೀಲನೆ:ಗುಜರಾತ್‌ನ ಕಾಂಡ್ಲಾದಲ್ಲಿ ದೀನದಯಾಳ್ ಬಂದರು ಪ್ರಾಧಿಕಾರದಿಂದ ನಿರಾಶ್ರಿತರಿಗೆ ತಾತ್ಕಾಲಿಕವಾಗಿ ನಿರ್ಮಿಸಿರುವ ಆಶ್ರಯ ಶೆಡ್ಗಳಿಗೆ ಮಂಗಳವಾರ ಕೇಂದ್ರ ಸಚಿವ ಡಾ.ಮನ್ಸುಖ್ ಮಾಂಡವಿಯಾ ಭೇಟಿ ನೀಡಿ,ಪರಿಶೀಲಿಸಿದರು. ಇದೇ ಸಂದರ್ಭದಲ್ಲಿ ನಿರಾಶ್ರಿತರಿಗೆ ಯಾವುದೇ ಆರೋಗ್ಯ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ಮಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪತ್ರಕರ್ತರಿಗೆ ಮಾಹಿತಿ ನೀಡಿದ್ದಾರೆ.
69 ರೈಲು ಸಂಚಾರ ರದ್ದು: ಬಿಪೊರ್ ಜೋಯ್ ಚಂಡಮಾರುತವು ಭಾರಿ ವಿನಾಶ ಸೃಷ್ಟಿಸುವ ಭೀತಿ ಎದುರಾಗಿದ್ದು ಪಶ್ಚಿಮ ರೈಲ್ವೆ ವಲಯವು ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಮಂಗಳವಾರ 69 ರೈಲುಗಳನ್ನು ರದ್ದುಗೊಳಿಸಿದೆ. 32 ರೈಲುಗಳನ್ನು ಶಾರ್ಟ್-ಟರ್ಮಿನೇಟ್ ಮಾಡಲಾಗಿದೆ. 26 ರೈಲುಗಳನ್ನು ಮುಂಜಾಗ್ರತಾ ಕ್ರಮವಾಗಿ ಅಲ್ಪಾವಧಿಗೆ ಪ್ರಾರಂಭಿಸಲಾಗುವುದು ಎಂದು ಪಶ್ಚಿಮ ರೈಲ್ವೆ CPRO ಸುಮಿತ್ ಠಾಕೂರ್ ತಿಳಿಸಿದ್ದಾರೆ.
ಚಂಡಮಾರುತ ವಿಪತ್ತು ಪರಿಣಾಮ ಯುದ್ಧೋಪಾದಿಯಲ್ಲಿ ಜನರ ಸಂರಕ್ಷಣೆಯಲ್ಲಿ ಭಾರತೀಯ ಸೇನೆ ಹಾಗೂ ಎನ್‌ಡಿಆರ್‌ಎಫ್ ತಂಡಗಳು ಕಾರ್ಯನಿರ್ವಹಿಸುತ್ತಿವೆ. ಈಗಾಗಲೇ ಗುಜರಾತ್ ರಾಜ್ಯಾದಂತ ಎನ್‌ಡಿಆರ್‌ಎಫ್ 18 ತಂಡಗಳನ್ನು ನಿಯೋಜಿಸಿದೆ. ಕಚ್‌ನಲ್ಲಿ 4, ಜಾಮ್‌ನಗರದಲ್ಲಿ 2, ರಾಜ್‌ಕೋಟ್ ಮತ್ತು ದ್ವಾರಕಾದಲ್ಲಿ ತಲಾ 3, ಪೋರಬಂದರ್, ಸೋಮನಾಥ್, ಮೊರ್ಬಿ, ವಲ್ಸಾದ್ ಮತ್ತು ಜುನಾಗಢದಲ್ಲಿ ತಲಾ 1 ತಂಡ ಹಾಗು 1 ತಂಡವನ್ನು ದಿಯುನಲ್ಲಿ ಕಾರ್ಯಾಚರಣೆಗೆ ಸನ್ನದ್ದವಾಗಿರಿಸಿದೆ.