ನವದೆಹಲಿ:ಬಂಗಾಳ ಕೊಲ್ಲಿಯಲ್ಲಿ ಎದ್ದಿರುವಅಸಾನಿ ಚಂಡಮಾರುತ ನಾಳೆ ಮಧ್ಯಾಹ್ನದ ವೇಳೆಗೆ ಕಾಕಿನಾಡ - ವಿಶಾಖಪಟ್ಟಣಂ ತಲುಪುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಒಡಿಶಾ - ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳಗಳ ಕರಾವಳಿ ತೀರದಲ್ಲಿ ಮುನ್ನೆಚ್ಚರಿಕೆ ಘೋಷಿಸಲಾಗಿದೆ.
ಅಸಾನಿ ಅಬ್ಬರದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ಆಂಧ್ರಪ್ರದೇಶ ಮತ್ತು ಒಡಿಶಾ ಮತ್ತು ಪಶ್ಚಿಮ ಬಂಗಾಳ ಕರಾವಳಿಯಲ್ಲಿ ಕೈಗೊಳ್ಳಲಾಗಿರುವ ಮುನ್ನೆಚ್ಚರಿಕಾ ಕ್ರಮಗಳನ್ನು ಪರಿಶೀಲಿಸಿದರು. ನಾಗರಿಕರ ಸಹಾಯಕ್ಕಾಗಿ ರಕ್ಷಣಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್)ಯ ಒಂಬತ್ತು ತಂಡಗಳನ್ನು ಒಡಿಶಾ ಕರಾವಳಿ ತೀರದಲ್ಲಿ ನಿಯೋಜಿಸಲಾಗಿದ್ದರೆ, ಆಂಧ್ರಪ್ರದೇಶದಲ್ಲಿ ಏಳು ತಂಡಗಳನ್ನು ಸನ್ನದ್ಧತೆಯಲ್ಲಿ ಇಡಲಾಗಿದೆ. ಒಡಿಶಾದಲ್ಲಿ ಒಂದು ತಂಡ ಬೀಡು ಬಿಟ್ಟಿದ್ದು ಎನ್ಡಿಎಫ್ಆರ್ನ 17 ಘಟಕಗಳು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಪಶ್ಚಿಮ ಬಂಗಾಳದಲ್ಲಿ 12 ತಂಡಗಳನ್ನು ನಿಯೋಜಿಸಲಾಗಿದ್ದು, ಐದು ತಂಡಗಳನ್ನ ಯಾವುದೇ ಸಮಯದಲ್ಲಿ ಬಳಸಿಕೊಳ್ಳಲು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ ಎಂದು ಕೇಂದ್ರ ಗೃಹ ಇಲಾಖೆ ಮಾಹಿತಿ ನೀಡಿದೆ.