ಆಗ್ರಾ : ಪ್ರಕರಣ 1- ಮೈನ್‌ಪುರಿಯ ಬೇವರ್ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ ಸುಶೀಲ್ ಕುಮಾರ್ ಎಂಬುವರು 19,000 ರೂ.ಗಳ ಸೈಬರ್ ವಂಚನೆ ಪ್ರಕರಣ ದಾಖಲಿಸಿದ್ದರು. ಮೈನ್‌ಪುರಿ ಪೊಲೀಸರು ಮತ್ತು ಸೈಬರ್ ಕ್ರೈಂ ಸೆಲ್ ಸೈಬರ್ ಕ್ರಿಮಿನಲ್ ಗ್ಯಾಂಗ್‌ನ ಆರು ದರೋಡೆಕೋರರನ್ನು ಬಂಧಿಸಿದ್ದಾರೆ. ಸೈಬರ್ ಅಪರಾಧಿಗಳಿಂದ 64,030 ರೂಪಾಯಿ ನಗದು, ಮೊಬೈಲ್, ಲ್ಯಾಪ್‌ಟಾಪ್, ಬಯೋಮೆಟ್ರಿಕ್ ಯಂತ್ರ, ಸೀಲ್, ಕಾರು ಸೇರಿದಂತೆ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣ 2: ಆಗ್ರಾದ ಸದರ್ ಬಜಾರ್ ನಿವಾಸಿ ರಮೇಶ್ ಕುಮಾರ್ ಅವರು ಸೈಬರ್ ಸೆಲ್‌ನಲ್ಲಿ 25,000 ರೂ.ಗಳ ಸೈಬರ್ ವಂಚನೆ ಬಗ್ಗೆ ದೂರು ನೀಡಿದ್ದರು. ಸೈಬರ್ ಕ್ರಿಮಿನಲ್ ಹರ್ಯಾಣದಲ್ಲಿರುವ ತನ್ನ ಬ್ಯಾಂಕ್ ಖಾತೆಯಿಂದ ಮೊತ್ತವನ್ನು ಎಗರಿಸಿದ್ದ. ಇಂಥ 4-5 ಪ್ರಕರಣಗಳು ಮುನ್ನೆಲೆಗೆ ಬಂದಿವೆ. ಇದರಲ್ಲಿ ಜಮೀನು ಖರೀದಿಸುವ ಮತ್ತು ಮಾರಾಟ ಮಾಡುವವರ ಬ್ಯಾಂಕ್ ಖಾತೆಯಿಂದ ಹಣವನ್ನು ಲಪಟಾಯಿಸಲಾಗಿದೆ.
ಈ ಎರಡು ಪ್ರಕರಣಗಳು ಕೇವಲ ಉದಾಹರಣೆಗಳಾಗಿವೆ. ನೀವೂ ಇತ್ತೀಚೆಗೆ ಆಸ್ತಿಯನ್ನು ಖರೀದಿಸಿದ್ದರೆ ಅಥವಾ ಮಾರಾಟ ಮಾಡಿದ್ದರೆ ಅಥವಾ ಮನೆಯನ್ನು ನೋಂದಾಯಿಸಿದ್ದರೆ ಅತ್ಯಂತ ಜಾಗರೂಕರಾಗಿರಿ. ಸೈಬರ್ ಕ್ರಿಮಿನಲ್‌ಗಳು ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕಬಹುದು. ಇದು ಹೇಗೆ ಸಾಧ್ಯವಾಗುತ್ತದೆ ಎಂಬುದನ್ನು ನೋಡೋಣ ಬನ್ನಿ.
ಭೂಮಿ ಖರೀದಿದಾರ, ಮಾರಾಟಗಾರ ಮತ್ತು ಸಾಕ್ಷಿಗಳ ಮಾಹಿತಿ ಈ ಎಲ್ಲ ಮಾಹಿತಿ ಡಿಜಿಟಲ್ ರೂಪದಲ್ಲಿ ನೋಂದಣಿ ಇಲಾಖೆಯ ವೆಬ್‌ಸೈಟ್‌ನಲ್ಲಿ ಸಾರ್ವಜನಿಕವಾಗಿ ಲಭ್ಯವಿರುತ್ತದೆ. ಹೌದು... ನೋಂದಣಿ ಇಲಾಖೆಯ ವೆಬ್‌ಸೈಟ್‌ನಿಂದ ಡೇಟಾವನ್ನು ಕದಿಯುವ ಮೂಲಕ ಜನರನ್ನು ವಂಚಿಸಲಾಗಿದೆ. ಆಗ್ರಾದಲ್ಲಿ ಇಂತಹ ಹಲವಾರು ಪ್ರಕರಣಗಳು ಈಗಾಗಲೇ ಘಟಿಸಿವೆ. ಮೈನ್‌ಪುರಿ ಪೊಲೀಸರು ಗುರುವಾರ ಅಂತಹ ಒಂದು ಅಂತಾರಾಜ್ಯ ಸೈಬರ್ ಕ್ರಿಮಿನಲ್ ಗ್ಯಾಂಗ್ ಅನ್ನು ಭೇದಿಸಿದ್ದಾರೆ.
ಈ ಸೈಬರ್ ಕ್ರಿಮಿನಲ್ಗಳ ಗ್ಯಾಂಗ್ ನೋಂದಣಿ ಇಲಾಖೆಯ ವೆಬ್‌ಸೈಟ್‌ನಿಂದ ಬೆರಳಚ್ಚು ಡೌನ್‌ಲೋಡ್ ಮಾಡುವ ಮೂಲಕ ಜನರ ಆಧಾರ್ ಕಾರ್ಡ್‌ಗಳನ್ನು ಕ್ಲೋನಿಂಗ್ ಮಾಡುವ ಮೂಲಕ ಬ್ಯಾಂಕ್ ಖಾತೆಗಳಿಂದ ಹಣ ವರ್ಗಾವಣೆ ಮಾಡಿಕೊಳ್ಳುತ್ತಿತ್ತು. ಪೊಲೀಸರ ವಿಚಾರಣೆ ವೇಳೆ ಸೈಬರ್ ಅಪರಾಧಿಗಳು ಹಲವು ಆಘಾತಕಾರಿ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ.