ನವದೆಹಲಿ:ಸಂಕಷ್ಟ ಪರಿಹಾರಕ ಗಣೇಶ ಚತುರ್ಥಿಯಾದ ಇಂದು (ಸೋಮವಾರ) ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಕರ್ನಾಟಕಕ್ಕೆ ಮತ್ತೆ ಹಿನ್ನಡೆಯಾಗಿದೆ. ತಮಿಳುನಾಡಿಗೆ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಸೂಚಿಸಿದ್ದ ಕಾವೇರಿ ನೀರು ನಿಯಂತ್ರಣ ಸಮಿತಿಯ ನಿರ್ಧಾರವನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ಸೋಮವಾರ ಎತ್ತಿಹಿಡಿದಿದೆ.
ಇಂದು (ಸೋಮವಾರ) ನಡೆದ ಸಭೆಯಲ್ಲಿ ಸೆಪ್ಟೆಂಬರ್ 13 ರಿಂದ ಅನ್ವಯವಾಗುವಂತೆ ಮುಂದಿನ 15 ದಿನಗಳವರೆಗೆ ನಿತ್ಯ 5 ಸಾವಿರ ಕ್ಯುಸೆಕ್ ನೀರನ್ನು ಕರ್ನಾಟಕ ತಮಿಳುನಾಡಿಗೆ ಹರಿಸಬೇಕು ಎಂದು ಆದೇಶಿಸಿದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ, ಈ ಬಗ್ಗೆ ಮುಂದಿನ ಸಭೆಯನ್ನು ಸೆಪ್ಟೆಂಬರ್ 26 ಕ್ಕೆ ನಡೆಸಲಾಗುವುದು ಎಂದಿದೆ. ಈ ಆದೇಶ ರಾಜ್ಯಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈಗಾಗಲೇ ಮಳೆ ಕೊರತೆಯಿಂದಾಗಿ ಕೆಆರ್ಎಸ್ ಅಣೆಕಟ್ಟೆಯಲ್ಲಿ ನೀರಿನ ಕೊರತೆ ಇದ್ದು, ನೀರು ಬಿಟ್ಟಲ್ಲಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಬಂದೊದಗಲಿದೆ.
ರಾಜ್ಯದ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆ, ಬರದ ತೀವ್ರತೆ ಹೆಚ್ಚುತ್ತಿದೆ. ಕುಡಿಯುವ ನೀರಿನ ಅಗತ್ಯತೆಗೂ ಸಮಸ್ಯೆಯಾಗಲಿದೆ. ಜಲಾಶಯಗಳ ಒಳಹರಿವು ಸುಧಾರಿಸದ ಹೊರತು ತಮಿಳುನಾಡಿಗೆ ನೀರು ಬಿಡುವ ಸ್ಥಿತಿಯಲ್ಲಿಲ್ಲ ಎಂದು ಕರ್ನಾಟಕ ಪ್ರಾಧಿಕಾರಕ್ಕೆ ವಾದ ಸಲ್ಲಿಸಿತ್ತು.
ಆದರೆ, ಸಭೆಯಲ್ಲಿ ತಮಿಳುನಾಡು ಮುಂದಿನ 15 ದಿನಗಳವರೆಗೆ ಬಾಕಿ ಇರುವ 6500 ಕ್ಯೂಸೆಕ್ ಸೇರಿದಂತೆ ಒಟ್ಟು 12,500 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಬೇಕು. ನಿತ್ಯ ಬಿಟ್ಟ 5 ಸಾವಿರ ಕ್ಯೂಸೆಕ್ ನೀರು ಬಿಳಿಗುಂಡ್ಲು ಅಣೆಕಟ್ಟೆ ಸೇರಿದ್ದನ್ನು ಖಚಿತಪಡಿಸಬೇಕು ಎಂದು ಒತ್ತಾಯಿಸಿತ್ತು.
ಕೊನೆಗೆ, ತಮಿಳುನಾಡಿನ ವಾದಕ್ಕೆ ಮನ್ನಣೆ ನೀಡಿದ ಪ್ರಾಧಿಕಾರ, ಈ ಹಿಂದೆ ಕಾವೇರಿ ನೀರು ನಿಯಂತ್ರಣ ಸಮಿತಿಯ ಶಿಫಾರಸನ್ನೇ ಎತ್ತಿ ಹಿಡಿದು ಪ್ರತಿದಿನ 15 ದಿನಗಳವರೆಗೆ 5 ಸಾವಿರ ಕ್ಯೂಸೆಕ್ ನೀರು ಹರಿಸಿ ಎಂದು ಅಂತಿಮ ಆದೇಶ ನೀಡಿತು.