ಹೈದರಾಬಾದ್:ಇಲ್ಲಿ ಶನಿವಾರ ನಡೆದ ಕಾರ್ಯಕಾರಿಣಿ ಸಮಿತಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಸಮರ ಸಾರಿರುವ ಕಾಂಗ್ರೆಸ್, ಜಾರಿ ಮಾಡಲು ಉದ್ದೇಶಿಸಿರುವ 'ಒಂದು ರಾಷ್ಟ್ರ ಒಂದು ಚುನಾವಣೆ' ಪರಿಕಲ್ಪನೆಯನ್ನು ಪಕ್ಷ ಸಾರಾಸಗಟಾಗಿ ತಿರಸ್ಕರಿಸಿದೆ. ಜೊತೆಗೆ ಸೋನಿಯಾ ಗಾಂಧಿ ಅವರು ಬರೆದ ಪತ್ರಕ್ಕೆ ಉತ್ತರ ನೀಡದೇ ಇದ್ದುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಿಡಿಕಾರಿದೆ.
ಸಿಡಬ್ಲ್ಯೂಸಿ ಸಭೆಯ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಹಿರಿಯ ಕಾಂಗ್ರೆಸ್ ನಾಯಕ, ಕೇಂದ್ರದ ಮಾಜಿ ಸಚಿವ ಪಿ ಚಿದಂಬರಂ ಅವರು, ದೇಶದಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸಲು ಸಮಿತಿ ರಚಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಕಾಂಗ್ರೆಸ್ ಒಪ್ಪುವುದಿಲ್ಲ. ಜೊತೆಗೆ ಯಾವುದೇ ಅಜೆಂಡಾ ಇಲ್ಲದೇ ದಿಢೀರನೇ ವಿಶೇಷ ಅಧಿವೇಶನ ಕರೆದಿದ್ದು, ಸೋನಿಯಾ ಗಾಂಧಿ ಅವರು 10 ಅಂಶಗಳ ಚರ್ಚೆಗೆ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದರು. ಆದರೆ, ಅದಕ್ಕೆ ಈವರೆಗೂ ಸರ್ಕಾರ ಉತ್ತರ ನೀಡಿಲ್ಲ ಎಂದು ಟೀಕಿಸಿದರು.
ಪ್ರಧಾನಿಗೆ ಸಭೆ ನಡೆಸಲು ಸಯಮವಿದೆ:ಮೇ 5 ರಿಂದ ಮಣಿಪುರ ಹೊತ್ತಿ ಉರಿಯುತ್ತಿದೆ. 175 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಹಿಂಸಾಚಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಲು ಸಮಯವಿಲ್ಲ. ಅವರಿಗೆ ವಿದೇಶಗಳಿಗೆ ಭೇಟಿ ನೀಡಲು, ಆಸಿಯಾನ್ ಶೃಂಗಸಭೆಯಲ್ಲಿ ಭಾಗವಹಿಸಲು ಮತ್ತು ಜಿ20 ಸಭೆ ನಡೆಸಲು ಸಮಯವಿದೆ. ಮಣಿಪುರಕ್ಕೆ ಮಾತ್ರ ಅವರು ಭೇಟಿ ನೀಡಲ್ಲ. ಇದು ಅಚ್ಚರಿಯ ಸಂಗತಿಯಾಗಿದೆ. ಸಂಸತ್ತಿನ ಅಧಿವೇಶನದಲ್ಲಿ ಮಣಿಪುರದ ಬಗ್ಗೆ ಒಂದಷ್ಟ ನಿಮಿಷಗಳ ಮಾತನಾಡಿದ್ದು, ಬಿಟ್ಟರೆ, ಅವರು ಹಿಂಸಾಪೀಡಿತ ರಾಜ್ಯದ ಬಗ್ಗೆ ಮಾತನಾಡಲಿಲ್ಲ ಎಂದು ಚಿದಂಬರಂ ಮೂದಲಿಸಿದರು.