ನವದೆಹಲಿ: ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸಭೆ ಇಂದು ನಡೆಯಲಿದೆ. ಎಲ್ಲರ ಗಮನ ಪಕ್ಷದ ಆಂತರಿಕ ಚುನಾವಣೆ ಮೇಲಿದ್ದು, ಈ ವಿಚಾರದ ಕುರಿತು ಯಾವುದೇ ಸ್ಪಷ್ಟತೆ ಇಲ್ಲ. ಹೌದು, ಈ ಬಗ್ಗೆ ಇಂದೇ ನಿರ್ಧಾರವಾಗಲಿದೆಯೋ ಅಥವಾ ಇನ್ನೂ ಕೆಲ ಸಮಯಗಳ ಕಾಲ ಮುಂದೂಡಿಕೆಯಾಗಲಿದೆಯೋ ಎನ್ನುವ ಗೊಂದಲ ಎಲ್ಲರಲ್ಲೂ ಇದೆ.
ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ವಿಚಾರ ಸೇರಿದಂತೆ ಆಂತರಿಕ ಚುನಾವಣೆಗೆ ಪಕ್ಷದಲ್ಲಿ ಹೆಚ್ಚಿನ ಬೇಡಿಕೆಯಿದೆ. ಪಕ್ಷದ ಬಲವರ್ಧನೆಗೆ ಆಂತರಿಕ ಚುನಾವಣೆಯ ಅಗತ್ಯ ಕೂಡಾ ಹೆಚ್ಚಾಗಿಯೇ ಇದೆ. ಆದ್ರೆ ಮುಂದಿನ ಲೋಕಸಭೆ ಚುನಾವಣೆ ಮತ್ತು ಕೋವಿಡ್ ಈ ಚುನಾವಣೆಗೆ ಅಡ್ಡಿಯಾಗಲಿದೆ.
ಪಕ್ಷದ ಆಂತರಿಕ ಚುನಾವಣೆ ಒಂದು ದೀರ್ಘ ಪ್ರಕ್ರಿಯೇ ಎಂದೇ ಹೇಳಬಹುದು. ಇದು ಬಹಳ ಸಮಯ ತೆಗೆದುಕೊಳ್ಳುತ್ತದೆ. ಅಲ್ಲದೇ ಪಕ್ಷ ಮುಂದಿನ ಲೋಕಸಭೆ ಚುನಾವಣೆ ಕುರಿತು ಗಮನ ಹರಿಸಬೇಕಾಗಿದೆ. ಒಂದು ವೇಳೆ, ಈ ಸಮಯದಲ್ಲಿ ಪಕ್ಷದ ಆಂತರಿಕ ಚುನಾವಣೆ ನಡೆಸಿದರೆ ಗಮನ ಬೇರೆಡೆಗೆ ತಿರುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿದೆ.
ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಕಳೆದ ಆಗಸ್ಟ್ನಲ್ಲಿ ಚುನಾವಣೆಯ ವೇಳಾಪಟ್ಟಿಯನ್ನು ಅಂತಿಮಗೊಳಿಸಲಾಗುವುದು, ನಂತರ ಸಮಗ್ರ ಅಧಿವೇಶನ ಕರೆಯಲಾಗುವುದು ಎಂದು ನಿರ್ಧರಿಸಿತ್ತು. ಆದ್ರೆ ಕೋವಿಡ್ ಕಾರಣದಿಂದ ಈ ಪ್ರಕ್ರಿಯೆ ಮುಂದೂಡುತ್ತಲೇ ಬಂದಿದೆ. ಈಗಲೂ ಚುನಾವಣೆ ನಡೆಯುತ್ತದೆಯೋ ಅಥವಾ ಮೇಲೆ ತಿಳಿಸಿದಂತೆ ಹಲವು ಕಾರಣಗಳಿಂದ ಮುಂದೂಡಿಕೆಯಾಗಲಿದೆಯೋ ಎಂಬುದು ಇಂದು ತಿಳಿಯಲಿದೆ.
ಕಾಂಗ್ರೆಸ್ನ ಪ್ರಮುಖ ನಾಯಕರೊಬ್ಬರು ಈ ಕುರಿತು ಮಾತನಾಡಿದ್ದು, ಸುಮಾರು 1,400 ಎಐಸಿಸಿ ಸದಸ್ಯರಿದ್ದಾರೆ. ಈ ಕುರಿತು ಸಭೆ ಕರೆದರೆ 5,000 - 6,000 ಜನರು ಒಂದೆಡೆ ಸೇರುವ ಸಂಭವವಿದೆ. ಅದರಿಂದ ಕೊರೊನಾ ನಿಯಮಗಳನ್ನು ಗಾಳಿಗೆ ತೂರಿದಂತಾಗುತ್ತದೆ. ಹಾಗಾಗಿ ಮುಂದಿನ ಕ್ರಮಗಳ ಕುರಿತು ಯೋಚಿಸಲಾಗುವುದು ಎಂದು ತಿಳಿಸಿದ್ದಾರೆ.