ಸಂಬಲ್‌ಪುರ(ಒಡಿಶಾ):ನಿನ್ನೆ(ಶುಕ್ರವಾರ) ರಾತ್ರಿ ಹನುಮ ಜಯಂತಿ ಯಾತ್ರೆಯಲ್ಲಿ ನಡೆದ ಹಿಂಸಾಚಾರದಲ್ಲಿ ಯುವಕ ಸಾವನ್ನಪ್ಪಿದ್ದು, ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಇದರಿಂದ ಮುಂದಿನ ಆದೇಶದವರೆಗೆ ತಕ್ಷಣಕ್ಕೆ ಜಾರಿಗೆ ಬರುವಂತೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಅಲ್ಲದೇ, 48 ಗಂಟೆಗಳ ಕಾಲ ಅಂತರ್ಜಾಲ ಸೇವೆ ಬಂದ್ ಮಾಡಲಾಗಿದೆ ಎಂದು ಅಲ್ಲಿನ ಜಿಲ್ಲಾಡಳಿತ ಆದೇಶ ಮಾಡಿದೆ.
ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 144(1) ಪ್ರಕಾರ ಸಂಬಲ್‌ಪುರ ಜಿಲ್ಲೆಯಲ್ಲಿ ತುರ್ತು ಪರಿಸ್ಥಿತಿ ಇರಲಿದೆ. ಯಾವುದೇ ವ್ಯಕ್ತಿಗಳು ಅಥವಾ ಗುಂಪುಗಳು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಂತಿಲ್ಲ. ಅಗತ್ಯ ಸೇವೆಗಳಿಗಾಗಿ ಬೆಳಗ್ಗೆ 2 ಸಂಜೆ 2 ಗಂಟೆ ಮಾತ್ರ ವಿನಾಯಿತಿ ನೀಡಲಾಗಿದೆ. ಮುಂದಿನ ಆದೇಶದವರೆಗೆ ಇದು ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.
ತುರ್ತು ವೇಳೆಯೂ ಯಾವುದೇ ಅಗತ್ಯ ವಸ್ತುಗಳ ಖರೀದಿಯನ್ನು ಬೆಳಗ್ಗೆ 8 ರಿಂದ 10 ಮತ್ತು ಮಧ್ಯಾಹ್ನ 3.30 ರಿಂದ ಸಂಜೆ 5.30 ರವರೆಗೆ ಮಾಡಬಹುದು. ಯಾವುದೇ ವೈದ್ಯಕೀಯ ತುರ್ತುಸ್ಥಿತಿಗಾಗಿ 7655800760 ಸಹಾಯವಾಣಿಯನ್ನು ಸಂಪರ್ಕಿಸಬಹುದು. ನಿಮಯ ಉಲ್ಲಂಘಿಸುವವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಶುಕ್ರವಾರ ಸಂಜೆ ಹನುಮ ಜಯಂತಿ ಮೆರವಣಿಗೆ ಹೊರಡುವಾಗ ಎರಡು ಗುಂಪುಗಳ ಮಧ್ಯೆ ಘರ್ಷಣೆ ಏರ್ಪಟ್ಟಿದೆ. ಇದು ಹಿಂಸಾಚಾರಕ್ಕೆ ತಿರುಗಿ ನಗರದ ಕೆಲವು ಭಾಗಗಳಲ್ಲಿ ದುಷ್ಕರ್ಮಿಗಳು ಹಲವಾರು ಅಂಗಡಿಗಳು ಮತ್ತು ಕಚೇರಿಗಳಿಗೆ ಬೆಂಕಿ ಹಚ್ಚಿದ್ದಾರೆ. ತಕ್ಷಣವೇ ಕ್ರಮ ಕೈಗೊಂಡಿರುವ ಪೊಲೀಸರು ಇನ್ನಷ್ಟು ಅಹಿತಕರ ಘಟನೆ ನಡೆಯದಂತೆ ಕರ್ಫ್ಯೂ ಹೇರಿದ್ದಾರೆ.