ನವದೆಹಲಿ: ಪದವಿಪೂರ್ವ ವಿದ್ಯಾರ್ಥಿಗಳಿಗೆ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆಯ (ಸಿಯುಇಟಿ-ಯುಜಿ) (CUET-UG) ಫಲಿತಾಂಶಗಳನ್ನು ಸೆಪ್ಟೆಂಬರ್ 15 ರೊಳಗೆ ಪ್ರಕಟಿಸುವ ನಿರೀಕ್ಷೆಯಿದೆ ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ಅಧ್ಯಕ್ಷ ಜಗದೇಶ್ ಕುಮಾರ್ ಹೇಳಿದ್ದಾರೆ.
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) CUET-UG ಫಲಿತಾಂಶಗಳನ್ನು ಸೆಪ್ಟೆಂಬರ್ 15 ರೊಳಗೆ ಅಥವಾ ಸಾಧ್ಯವಾದರೆ, ಒಂದೆರಡು ದಿನಗಳ ಮುಂಚೆಯೇ ಪ್ರಕಟಿಸುವ ನಿರೀಕ್ಷೆಯಿದೆ. ಸಂಬಂಧಿಸಿದ ಎಲ್ಲ ವಿಶ್ವವಿದ್ಯಾನಿಲಯಗಳು CUET-UG ಸ್ಕೋರ್ ಆಧರಿಸಿ ಪದವಿಪೂರ್ವ ಪ್ರವೇಶ ಪ್ರಕ್ರಿಯೆಯನ್ನು ಪ್ರಾರಂಭಿಸಲು ತಮ್ಮ ವೆಬ್ ಪೋರ್ಟಲ್‌ಗಳನ್ನು ಸಿದ್ಧಪಡಿಸಬೇಕು ಎಂದು ಯುಜಿಸಿ ಅಧ್ಯಕ್ಷರು ಹೇಳಿದರು.
ಆಗಸ್ಟ್ 30 ರಂದು CUET-UG ಪರೀಕ್ಷೆಗಳ 6 ನೇ ಹಂತದ ಕೊನೆಯ ದಿನವಾಗಿತ್ತು. ದೇಶದಾದ್ಯಂತ CUET-UG ಪರೀಕ್ಷೆಗೆ ಸುಮಾರು ಶೇ 60ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದರು ಎಂದು ಅವರು ತಿಳಿಸಿದರು.
ನಿಧಾನಗತಿಯ ಇಂಟರ್ನೆಟ್‌ನಿಂದಾಗಿ ಜಾರ್ಖಂಡ್‌ನ ಹಲವಾರು ಸ್ಥಳಗಳಲ್ಲಿ ಪರೀಕ್ಷೆಯನ್ನು ನಡೆಸಲು ಸಾಧ್ಯವಾಗಲಿಲ್ಲ. ಇದರಿಂದ 103 ವಿದ್ಯಾರ್ಥಿಗಳ ಮೇಲೆ ಪರಿಣಾಮವಾಗಿದ್ದು ವಿವರವಾದ ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಪ್ರಾಥಮಿಕ ವರದಿಗಳ ಪ್ರಕಾರ, ನಿಧಾನಗತಿಯ ಇಂಟರ್ನೆಟ್ ವೇಗದಿಂದಾಗಿ ಜಾರ್ಖಂಡ್‌ನ ರಾಮಗಢ್ನಲ್ಲಿರುವ ರಾಧಾ ಗೋವಿಂದ್ ವಿಶ್ವವಿದ್ಯಾನಿಲಯ ಕೇಂದ್ರದಲ್ಲಿ ಪರೀಕ್ಷೆಯನ್ನು ನಡೆಸಲಾಗಲಿಲ್ಲ. ಪರೀಕ್ಷೆ ವಂಚಿತ 103 ಅಭ್ಯರ್ಥಿಗಳಿಗೆ ಮತ್ತೆ ಪರೀಕ್ಷೆಯನ್ನು ಶೀಘ್ರದಲ್ಲೇ ನಡೆಸಲಾಗುವುದು ಎಂದು ಅವರು ಹೇಳಿದರು.
ಇದನ್ನೂ ಓದಿ: EXCLUSIVE: ಸಿಯುಇಟಿ ನಲ್ಲಿ ನೀಟ್ ಮತ್ತು ಜೆಇಇ ವಿಲೀನ.. ಯುಜಿಸಿ ಅಧ್ಯಕ್ಷರ ಸಂದರ್ಶನ