ಶಿಮ್ಲಾ:ಬಹುಕೋಟಿ ಕ್ರಿಪ್ಟೋಕರೆನ್ಸಿ ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಪೊಲೀಸ್ ಸಿಬ್ಬಂದಿ, ಓರ್ವ ಅರಣ್ಯ ರಕ್ಷಕ ಸೇರಿದಂತೆ ಎಂಟು ಜನರನ್ನು ಬಂಧಿಸಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಸುಮಾರು ಒಂದು ಲಕ್ಷ ಹೂಡಿಕೆದಾರರಿಂದ ತಲಾ 2 ಕೋಟಿ ರೂ.ಗಿಂತ ಹೆಚ್ಚು ಹಣ ಪಡೆದ 70 ರಿಂದ 80 ವಂಚಕರಲ್ಲಿ ಈ ಎಂಟು ಜನ ಸೇರಿದ್ದಾರೆ ಎಂದು ಡಿಜಿಪಿ ಸಂಜಯ್ ಕುಂಡು ಪಿಟಿಐಗೆ ತಿಳಿಸಿದ್ದಾರೆ.
ಈವರೆಗೆ ಪ್ರಮುಖ ಆರೋಪಿಗಳಾದ ಮಂಡಿಯ ಹೇಮರಾಜ್ ಮತ್ತು ಸುಖದೇವ್, ಉನಾದ ಅರುಣ್ ಗುಲೇರಿಯಾ ಮತ್ತು ಅಭಿಷೇಕ್ ಸೇರಿದಂತೆ 18 ಜನರನ್ನು ಬಂಧಿಸಲಾಗಿದೆ ಎಂದು ಡಿಜಿಪಿ ತಿಳಿಸಿದ್ದಾರೆ. ಹೊಸದಾಗಿ ಹಣ ಹೂಡಿಕೆ ಮಾಡಿದವರಿಂದ ಕೋಟ್ಯಂತರ ರೂಪಾಯಿ ಹಣ ಗಳಿಸಿದ ಎರಡನೇ ಹಂತದ ವಂಚಕರನ್ನು ಹುಡುಕಲು ನಾವೀಗ ತನಿಖೆ ನಡೆಸುತ್ತಿದ್ದೇವೆ ಎಂದು ಅವರು ಹೇಳಿದರು.
ಪ್ರಕರಣದ ತನಿಖೆಯಲ್ಲಿ ಹಿಮಾಚಲ ಪ್ರದೇಶದ ಪೊಲೀಸರು ಕೇಂದ್ರ ಮತ್ತು ಹಣಕಾಸು ಸಂಸ್ಥೆಗಳು ಮತ್ತು ಇತರ ರಾಜ್ಯಗಳ ಪೊಲೀಸರೊಂದಿಗೆ ಸಮನ್ವಯ ಸಾಧಿಸುತ್ತಿದ್ದಾರೆ ಎಂದು ಡಿಜಿಪಿ ಹೇಳಿದರು. ಶನಿವಾರ ಬಂಧಿಸಲಾದ ಎಂಟು ಜನರಲ್ಲಿ ಮೂವರು ಹಮೀರ್ಪುರದವರು, ಇಬ್ಬರು ಸೋಲನ್ನ ಬಡ್ಡಿ ಮತ್ತು ಶಿಮ್ಲಾ, ಉನಾ ಮತ್ತು ಕಾಂಗ್ರಾದ ತಲಾ ಒಬ್ಬರು ಸೇರಿದ್ದಾರೆ. ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯ್ದೆ 2019 ರ ಅಡಿಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.