ಪ್ರಯಾಗರಾಜ್ (ಉತ್ತರ ಪ್ರದೇಶ): ಇತ್ತೀಚಿಗೆ ಗುಂಡಿನ ದಾಳಿಯಲ್ಲಿ ಹತ್ಯಯಾದ ಗ್ಯಾಂಗ್ಸ್ಟರ್ ಕಂ ರಾಜಕಾರಣಿ ಅತೀಕ್ ಅಹ್ಮದ್ ಪರ ವಕೀಲರೊಬ್ಬರ ನಿವಾಸದ ಬಳಿಯ ಕಚ್ಚಾ ಬಾಂಬ್ ಸ್ಫೋಟಿಸಿರುವ ಘಟನೆ ಉತ್ತರ ಪ್ರದೇಶದ ಪ್ರಯಾಗರಾಜ್ ಜಿಲ್ಲೆಯ ಕತ್ರಾ ಪ್ರದೇಶದಲ್ಲಿ ನಡೆದಿದೆ. ಇಂದು ಮಧ್ಯಾಹ್ನ 2.30ರ ಸುಮಾರಿಗೆ ಸಂಭವಿಸಿದ ಸ್ಫೋಟದಲ್ಲಿ ಯಾವುದೇ ಸಾವು-ನೋವಿನ ವರದಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಅತೀಕ್ ಪರ ವಕೀಲ ದಯಾಶಂಕರ್ ಮಿಶ್ರಾ ಮನೆಯ ಸಮೀಪ ಕಚ್ಚಾ ಬಾಂಬ್ ಎಸೆಯಲಾಗಿದೆ. ಆದರೆ, ವಕೀಲರನ್ನು ಗುರಿಯಾಗಿಸಿಕೊಂಡು ಬಾಂಬ್ ಸ್ಫೋಟಿಸಿಲ್ಲ. ಬದಲಿಗೆ ಇಬ್ಬರು ಯುವಕರ ನಡುವಿನ ವೈಯಕ್ತಿಕ ದ್ವೇಷದಿಂದ ಕೃತ್ಯ ಎಸಗಲಾಗಿದೆ ಎಂದು ಕರ್ನಲ್‌ಗಂಜ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ರಾಮ್ ಮೋಹನ್ ರಾಯ್ ತಿಳಿಸಿದ್ದಾರೆ. ಆದರೆ, ಇದು ಜನತೆಯನ್ನು ಭಯಭೀತರಾಗಿಸುವ ಮತ್ತು ಭಯೋತ್ಪಾದನೆಯನ್ನು ಸೃಷ್ಟಿಸುವ ಪ್ರಯತ್ನ ಎಂದು ವಕೀಲ ಮಿಶ್ರಾ ದೂರಿದ್ದಾರೆ.
ಇದನ್ನೂ ಓದಿ:ಗ್ಯಾಂಗ್ಸ್ಟರ್ - ರಾಜಕಾರಣಿ ಅತೀಕ್ ಅಹ್ಮದ್, ಸಹೋದರ ಅಶ್ರಫ್ಗೆ ಗುಂಡಿಕ್ಕಿ ಹತ್ಯೆ
"ನಾನು ಇಂದು ನ್ಯಾಯಾಲಯದಲ್ಲಿದ್ದೆ. ಇದರ ನಡುವೆ ಬಾಂಬ್‌ಗಳನ್ನು ಎಸೆಯಲಾಗಿದೆ ಎಂದು ನನ್ನ ಮಗ ನನಗೆ ತಿಳಿಸಿದ. ಕಾರಣ ನಾನು ಮನೆಗೆ ಧಾವಿಸಿದೆ. ನನ್ನನ್ನು ಹೆದರಿಸಲು, ಭಯೋತ್ಪಾದನೆಯನ್ನು ಸೃಷ್ಟಿಸಲು ಇದನ್ನು ಮಾಡಲಾಗಿದೆ ಎಂದು ನಾನು ಭಾವಿಸುತ್ತೇನೆ. ಇದೊಂದು ದೊಡ್ಡ ಷಡ್ಯಂತ್ರ. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚುವುದು ಪೊಲೀಸರ ಕರ್ತವ್ಯವಾಗಿದೆ'' ಎಂದು ದಯಾಶಂಕರ್ ಮಿಶ್ರಾ ಒತ್ತಾಯಿಸಿದ್ದಾರೆ.
ಅಲ್ಲದೇ, ''ಈ ಕೃತ್ಯದಲ್ಲಿ ಭಾಗಿಯಾಗಿರುವ ವ್ಯಕ್ತಿಯೋರ್ವನನ್ನು ನನ್ನ ಮಗಳು ಮತ್ತು ಸ್ಥಳೀಯರು ನೋಡಿದ್ದಾರೆ. ಮೂರು ಬಾಂಬ್‌ಗಳನ್ನು ಎಸೆಯಲಾಗಿದೆ'' ಎಂದೂ ಮಿಶ್ರಾ ಹೇಳಿದ್ದಾರೆ. ಮತ್ತೊಂದೆಡೆ, "ಕತ್ರಾ ಪ್ರದೇಶದಲ್ಲಿ ಇಬ್ಬರು ಯುವಕರ ವೈಯಕ್ತಿಕ ದ್ವೇಷದ ಕಾರಣ ಕಚ್ಚಾ ಬಾಂಬ್ ಎಸೆಯಲಾಗಿದೆ. ಆದರೆ, ಕಾಕತಾಳೀಯ ಎಂಬಂತೆ ಅತೀಕ್ ಅಹ್ಮದ್ ಪರ ವಕೀಲರ ಮನೆಯ ಬಳಿ ಈ ಘಟನೆ ಸಂಭವಿಸಿದೆ'' ಎಂದು ಎಸ್‌ಎಚ್‌ಒ ರಾಮ್ ಮೋಹನ್ ರಾಯ್ ಸ್ಪಷ್ಟನೆ ನೀಡಿದ್ದಾರೆ.